ಕುಂದಾಪುರ: ಕೇರಳದ ಮತ್ತೊಂದು ನ್ಯಾಯಾಲಯವು “ಕಾಂತಾರ” ಚಿತ್ರದಲ್ಲಿ “ವರಾಹ ರೂಪಂ’ ಹಾಡನ್ನು ಬಳಸದಂತೆ, ಯಾವುದೇ ಸಾಮಾಜಿಕ ಜಾಲತಾಣ, ಯೂ ಟ್ಯೂಬ್, ವೆಬ್ ಸೈಟ್ ಗಳಲ್ಲಿ ಬಳಕೆ ಮಾಡದಂತೆ ತಡೆಯಾಜ್ಞೆ ನೀಡಿದೆ.
ಕುಂದಾಪುರದ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ ‘ಕಾಂತಾರ’ ಸಿನಿಮಾಕ್ಕೆ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯವು “ನವರಸಂ” ಹಾಡಿನ ಮೇಲೆ ಹಕ್ಕುಸ್ವಾಮ್ಯವನ್ನು ಹೊಂದಿರುವ ಸಂಸ್ಥೆ ಸಲ್ಲಿಸಿದ ಹಕ್ಕುಸ್ವಾಮ್ಯ ಉಲ್ಲಂಘನೆಯ ಆರೋಪದ ಮೊಕದ್ದಮೆಗೆ ಸಂಬಂಧಿಸಿದಂತೆ ತಡೆಯಾಜ್ಞೆ ನೀಡಿದೆ.
ಇತ್ತೀಚೆಗಷ್ಟೆ ‘ವರಾಹ ರೂಪಂ’ ಅನ್ನು ಅದರ “ನವರಸಂ” ಹಾಡಿನಿಂದ ಕೃತಿಚೌರ್ಯ ಮಾಡಲಾಗಿದೆ ಎಂದು ಆರೋಪಿಸಿ ಕೇರಳ ಮೂಲದ ರಾಕ್ ಮ್ಯೂಸಿಕ್ ಬ್ಯಾಂಡ್ “ತೈಕ್ಕುಡಮ್ ಬ್ರಿಡ್ಜ್” ಸಲ್ಲಿಸಿದ ಮೊಕದ್ದಮೆ ಸಂಬಂಧಿಸಿ ಕೋಝಿಕೋಡ್‌ನಲ್ಲಿರುವ ಪ್ರಧಾನ ಜಿಲ್ಲಾ ನ್ಯಾಯಾಲಯವು “ಕಾಂತಾರ” ನಿರ್ಮಾಪಕರು ವರಾಹ ರೂಪಂ ಹಾಡನ್ನು ಚಿತ್ರಮಂದಿರಗಳಲ್ಲಿ ಮತ್ತು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಸದಂತೆ ತಾತ್ಕಾಲಿಕ (ಮಧ್ಯಂತರ) ತಡೆಯಾಜ್ಞೆ ನೀಡಿತ್ತು. ಇದೀಗ ಎರಡನೇ ನ್ಯಾಯಾಲಯದಲ್ಲಿ ಎರಡೆರಡು ತಡೆಯಾಜ್ಞೆಗಳನ್ನು ನೀಡಿದ್ದು ಕಾಂತಾರಕ್ಕೆ ಸಂಕಷ್ಟ ತಂದೊಡ್ಡಿದೆ.
