ಮಂಗಳೂರು: ಕನ್ನಡಿಗರೇ ಬಹುಪಾಲು ಇರುವ ಗಡಿನಾಡು ಕಾಸರಗೋಡು ಜಿಲ್ಲೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಕನ್ನಡ ಭಾಷೆಗೆ ತೊಡಕುಂಟಾಗುತ್ತಿದೆ. ಕನ್ನಡವೇ ಗೊತ್ತಿಲ್ಲದ ಮಲಯಾಳಿ ಶಿಕ್ಷಕಿಯನ್ನು ಕನ್ನಡ ಶಾಲೆಯ ಶಿಕ್ಷಕಿಯನ್ನಾಗಿ ನಿಯುಕ್ತಿ ಮಾಡಿ ಕೇರಳ ಸರ್ಕಾರ ಉದ್ಧಟತನ ಮೆರೆದಿದೆ.
ಸರ್ಕಾರ ಕಾಸರಗೋಡು ಜಿಲ್ಲೆಯ ಅಡೂರು ಸರ್ಕಾರಿ ಪ್ರೌಢಶಾಲೆಗೆ ಮಲಯಾಳಂ ಶಿಕ್ಷಕಿಯನ್ನು ನೇಮಕ ಮಾಡಿದೆ. ಕನ್ನಡ ಮಾಧ್ಯಮದ ಈ ಶಾಲೆಯಲ್ಲಿ ಮಲಯಾಳಂ ಶಿಕ್ಷಕಿ ಸಮಾಜ ವಿಜ್ಞಾನ ಪಾಠ ಹೇಳುತ್ತಾರೆ. ಆದರೆ ಮಲಯಾಳಿ ಶಿಕ್ಷಕಿಗೆ ಕನ್ನಡ ಒಂಚೂರು ಗೊತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಆಕ್ರೋಶಗೊಂಡಿರುವ ಪೋಷಕರು ಮತ್ತು ವಿದ್ಯಾರ್ಥಿಗಳು ಕೇರಳ ಸರ್ಕಾರದ ವಿರುದ್ಧ ಶಾಲೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಹತ್ತನೇ ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಮಲಯಾಳಿ ಶಿಕ್ಷಕಿಯ ಪಾಠವೂ ಅರ್ಥವಾಗುತ್ತಿಲ್ಲ. ಇದರಿಂದ ಪರೀಕ್ಷೆ ಎದುರಿಸಲು ಕಷ್ಟವಾಗುತ್ತಿದೆ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಗಡಿನಾಡಿನಲ್ಲಿ ಕನ್ನಡದ ಮೇಲೆ ಮಲತಾಯಿ ಧೋರಣೆ ನಡೆಯುತ್ತಿದೆ ಎಂದು ಆರೋಪಿಸಿರುವ ಪೋಷಕರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.