ಮಂಗಳೂರು : ತೆಂಕುತಿಟ್ಟಿನ ಯಕ್ಷಗಾನದ ಪ್ರತಿಭಾನ್ವಿತ ಯುವ ಕಲಾವಿದರಾದ ಜಗದೀಶ ನಲ್ಕ (46) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಕಳೆದ 21 ವರ್ಷಗಳಿಂದ ಸಸಿಹಿತ್ಲು ಮೇಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜಗದೀಶ್ ನಲ್ಕ ಅವರು ಭಗವತಿ ಮಹಾತ್ಮೆಯಲ್ಲಿ ಈಶ್ವರನ ಪಾತ್ರ, ದೇವಿಮಹಾತ್ಮೆಯಲ್ಲಿ ವಿಷ್ಣು, ರಕ್ತಬೀಜಾಸುರನ ಪಾತ್ರಗಳನ್ನು ಸೊಗಸಾಗಿ ನಿರ್ವಹಿಸುತ್ತಿದ್ದರು. ಎಳವೆಯಲ್ಲಿಯೇ ಯಕ್ಷಗಾನ, ನಾಟಕ, ಹರಿಕಥೆ, ಏಕಪಾತ್ರ ಅಭಿನಯ ಮುಂತಾದ ಹಲವು ಕಲಾ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಕಲಾವಿದರಾಗಿ ರೂಪುಗೊಂಡು ಹಲವಾರು ವರ್ಷಗಳಿಂದ ಸಸಿಹಿತ್ಲು ಭಗವತೀ ಮೇಳದಲ್ಲಿ ಪ್ರಮುಖ ಕಲಾವಿದರಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದರು. ಹೊಸ ಪ್ರಸಂಗಗಳ ಕಥಾನಾಯಕನ ಪಾತ್ರವನ್ನು ನಿರ್ವಹಿಸಿ ಪ್ರಸಂಗದ ಯಶಸ್ವಿಗೆ ಕಾರಣೀಭೂತರಾಗಿದ್ದರು, ಯಾವುದೇ ಪಾತ್ರವನ್ನು ಪಾತ್ರಗಳಿಗೆ ಕಿಂಚಿತ್ತು ಅಪಚಾರ ವಾಗದಂತೆ ನಿರ್ವಹಿಸುವ ಕಲಾವಿದರಾಗಿದ್ದು ಅವರ ಅಗಲುವಿಕೆಯಿಂದ ಯಕ್ಷರಂಗಕ್ಕೂ ತುಂಬಲಾರದ ನಷ್ಟವಾಗಿದೆ. ಅವರು ಪತ್ನಿ, ಪುತ್ರಿ, ಪುಟ್ಟ ಗಂಡು ಮಗುವನ್ನು ಅಗಲಿದ್ದಾರೆ.