ಭಟ್ಕಳ: ಇನ್ಸ್ಟಾಗ್ರಾಮ್ ಗೆಳೆಯನ ಕಿರುಕುಳಕ್ಕೆ ಬೇಸತ್ತು ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಮಕ್ಕಿ, ಹಾಡವಳ್ಳಿಯಲ್ಲಿ ನಡೆದಿದೆ.ನೇತ್ರಾ ಮುತ್ತಯ್ಯ ಗೋವಾಳಿ ಮೃತ ಯುವತಿ.ನೇತ್ರಾ ಭಟ್ಕಳ ನಗರದಲ್ಲಿ ಖಾಸಗಿ ಕಚೇರಿಯೊಂದರಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕೆಲಸ ನಿರ್ವಹಿಸುತ್ತಿದ್ದಳು ಎನ್ನಲಾಗಿದೆ. ಈಕೆಗೆ ಕಿರುಕುಳವನ್ನು ನೀಡಿದ ಆರೋಪಿಯಾದ ಮುಂಡಳ್ಳಿ ನಿವಾಸಿ ಗೋವರ್ಧನ ಮೊಗೇರ ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿ ನಂತರ ಗೆಳೆತನ ಮಾಡಿಕೊಂಡವನು ತಾನು ಖರ್ಚು ಮಾಡಿದ ಹಣ ಕೊಡುವಂತೆ ಹೇಳಿ ಕರೆ ಮಾಡಿ ಹೆದರಿಸಿ ಚಿತ್ರಹಿಂಸೆ ನೀಡಿ, ನಿನ್ನ ಅಶ್ಲೀಲ ಫೋಟೋಗಳನ್ನು ತಾನು ಫೇಸ್ ಬುಕ್ ನಲ್ಲಿ ಹಾಕಿ ನಿನ್ನ ಮಾನ ಮರ್ಯಾದೆ ತೆಗೆದು ನಿನಗೆ ಸಾಯಿಸುತ್ತೇನೆ ಇಲ್ಲಾದರೆ ಮರ್ಯಾದೆಗೆ ನೀನೆ ಸಾಯಬೇಕು ಎಂದು ಹೇಳಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡು ಯುವತಿ ಮನನೊಂದು ತನ್ನ ಹಳೆಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ತನ್ನ ಮಗಳ ಸಾವಿಗೆ ಗೋವರ್ಧನ ಮೊಗೇರ ಈತನ ಕಿರುಕುಳವೇ ಕಾರಣ ಎಂದು ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಮೃತ ಯುವತಿಯ ತಂದೆ ಮುತ್ತಯ್ಯ ಗೋವಾಳಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಗ್ರಾಮೀಣ ಠಾಣೆಯ ಪಿ.ಎಸ್.ಐ. ಶ್ರೀಧರ ನಾಯ್ಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.ವಿದ್ಯಾವಂತಳಾದ ಯುವತಿ ಆತ್ಮಹತ್ಯೆಗೆ ಮುಂದಾಗಿರುವುದು ಕುಟುಂಬದ ಆಕ್ರಂದನಕ್ಕೆ ಕಾರಣವಾಗಿದ್ದು ಆರೋಪಿ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
©2021 Tulunada Surya | Developed by CuriousLabs