ಬೆಂಗಳೂರು:ಕದಿಯುವುದೇ ವೃತ್ತಿ ಮಾಡ್ಕೊಂಡಿದ್ದ ಕಳ್ಳ ದಂಪತಿಯನ್ನು ಬೆಂಗಳೂರು ಪೊಲೀಸರು ಮಟ್ಟಹಾಕಿ ಬಂಧಿಸಿದ್ದಾರೆ. ನಗರದಲ್ಲಿ ಬೀಗ ಹಾಕಿದ್ದ ಮನೆಗಳನ್ನು ಟಾರ್ಗೆಟ್ ಮಾಡಿ ದೋಚುತ್ತಿದ್ದ ದಂಪತಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ನಾಗರಾಜ್ ಮತ್ತು ರಮ್ಯ ಬಂಧಿತ ದಂಪತಿ. ಇವರಿಬ್ಬರೂ ಕಳ್ಳತನವನ್ನೇ ವೃತ್ತಿ ಮಾಡ್ಕೊಂಡಿದ್ದರು. ಬೀಗ ಹಾಕಿದ್ದ ಮನೆಗಳು ಇವರ ಟಾರ್ಗೆಟ್ ಆಗಿತ್ತು. ಮೈಸೂರು ಮೂಲದ ರಮ್ಯ ಮತ್ತು ಬೆಂಗಳೂರಿನ ಉತ್ತರಹಳ್ಳಿ ಮೂಲದ ನಾಗರಾಜ್ ನಡುವೆ ಪರಿಚಯವಾಗಿತ್ತು. ಬಳಿಕ ಇಬ್ಬರೂ ಕೂಡ ಇನ್‍ಸ್ಟಾಗ್ರಾಮ್ ಮೂಲಕ ಚಾಟ್ ಮಾಡಿಕೊಂಡು ಮತ್ತಷ್ಟು ಸ್ನೇಹ ಬೆಳೆಸಿಕೊಂಡಿದ್ದರು. ಈ ಸ್ನೇಹ ಬಳಿಕ ಪ್ರೀತಿಗೆ ತಿರುಗಿತ್ತು. ನಂತರ ಮದುವೆಯಾಗಿದ್ದರು. ಮದುವೆಯ ಬಳಿಕ ನಾಗರಾಜ್ ಮತ್ತು ರಮ್ಯ ಸೇರಿಕೊಂಡು ಕಳ್ಳತನ ಮಾಡಲು ಶುರು ಮಾಡಿದ್ದರು. ಇಬ್ಬರು ಪ್ರಮುಖ ರಸ್ತೆಗಳಲ್ಲಿ ತಿರುಗಿ ವಸತಿ ಸ್ಥಳಗಳಲ್ಲಿ ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡ್ತಿದ್ರು. ನಾಗರಾಜ್ ಕಳ್ಳತನ ಮಾಡಲು ಮನೆ ಒಳಗೆ ಹೋಗಿದ್ರೆ ರಮ್ಯ ಬಾಗಿಲಲ್ಲಿ ನಿಂತು ಕಾಯುತಿದ್ಲು. ಯಾರಾದ್ರು ಬಂದ್ರೆ ನಾಗರಾಜ್‍ಗೆ ಸಿಗ್ನಲ್ ಕೊಟ್ಟು ನಂತ್ರ ಸ್ಥಳದಿಂದ ಎಸ್ಕೇಪ್ ಆಗ್ತಿದ್ರು. ಕದ್ದ ಚಿನ್ನವನ್ನು ರಮ್ಯ ಅಡಮಾನ ಇಟ್ಟು ಹಣ ಪಡೆಯುತ್ತಿದ್ದರು. ಹೀಗೆ ಜೀವನ ನಡೆಸುತ್ತಿದ್ದ ಚಾಲಾಕಿ ಜೋಡಿ ಇದೀಗ ಪೊಲೀಸರ ಬಲೆಗೆ ಬಿದ್ದಿದೆ.ಒಂಟಿ ಮನೆಗಳ ಕಳ್ಳತನದ ಬಳಿಕ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆರೋಪಿಗಳ ಹುಡುಕಾಟದ ವೇಳೆ ಈ ದಂಪತಿ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಂದ ಐದು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ಮತ್ತು ವಾಹನಗಳು ವಶಕ್ಕೆ ಪಡೆಯಲಾಗಿದ್ದು, ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.