ಉಳ್ಳಾಲ: ಕುಂಪಲ ಬಾಲಕೃಷ್ಣ ಮಂದಿರದ ಅಧ್ಯಕ್ಷರಾದ ಸತೀಶ್ ಕುಂಪಲ ಹಾಗೂ ಮಂದಿರ ಸಮಿತಿ ತಂಡ ದಿನಾಂಕ 13-12-2022 ಮಂಗಳವಾರ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪುರವರ ಮನೆಗೆ ಭೇಟಿ ನೀಡಿ ರಾಜ್ಯೋತ್ಸವ ಪ್ರಸಸ್ತಿ ಪಡೆದ ಯೋಗೀಶ್ ಶೆಟ್ಟಿ ಜಪ್ಪು ರವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.
ಯೋಗೀಶ್ ಶೆಟ್ಟಿ ಜಪ್ಪುರವರು ಹಲವಾರು ಜನಪರ ಕೆಲಸ ಕಾರ್ಯಗಳಲ್ಲಿ ಗುರುತಿಸಿಕೊಂಡು, “ತುಳುನಾಡ ಸಾರಥಿ” ಎಂದು ಪ್ರಸಿದ್ಧಿಯನ್ನು ಪಡೆದುಕೊಂಡು, ತುಳುನಾಡಿನ ಜನಪ್ರಿಯ ಸಂಘಟನೆಯಾದ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷರಾಗಿ, ಕಳೆದ 14 ವರ್ಷಗಳಿಂದ ನಿರಂತರವಾಗಿ ತುಳುನಾಡಿನ ನೆಲ, ಜಲ ಹಾಗೂ ತುಳುನಾಡಿನ ಆಚಾರ, ವಿಚಾರ, ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಹಾಗೂ ತುಳು ಭಾಷೆಯನ್ನು ರಾಜ್ಯದ 2ನೇ ಅಧಿಕೃತ ಭಾಷೆಯನ್ನಾಗಿಸಬೇಕೆಂಬ ಆಗ್ರಹವನ್ನು ಕಾನೂನು ರೀತಿಯಲ್ಲಿ ಹೋರಾಟ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಜನರಲ್ಲಿ ಅರಿವು ಮೂಡಿಸುತ್ತ ನಿರಂತರವಾಗಿ ನಡೆಸುತ್ತಾ ಬಂದಿದ್ದಾರೆ.
ತುಳು ಲಿಪಿಯ ಪ್ರಚಾರ, ತುಳುನಾಡಿನ ಪರಂಪರೆ, ಸಂಸ್ಕೃತಿಯನ್ನು ಜಗತ್ತಿನ ಜನರಿಗೆ ಪರಿಚಯಿಸುವ ದೃಷ್ಟಿಯಿಂದ 2019ರಲ್ಲಿ ಮಂಗಳೂರಿನಲ್ಲಿ 3 ದಿನಗಳ ಚೌಳವ ಉಚ್ಚಯ” ಎಂಬ ವಿಶ್ವ ತುಳುವರ ಸಮ್ಮಿಲನ ಕಾರ್ಯಕ್ರಮದ ಮುಂದಾಳತ್ವವನ್ನು ವಹಿಸಿರುತ್ತಾರೆ. ಈ ಕಾರ್ಯಕ್ರಮದಲ್ಲಿ ವಿಚಾರ ಸಂಕಿರಣ, ಸಂಗೀತ, ನೃತ್ಯ, ನಾಟಕ, ತುಳು ಸಿನಿಮಾಗೆ ಸಂಬಂಧಿಸಿದ ಮನರಂಜನೆ ಕಾರ್ಯಕ್ರಮಗಳು ನಡೆದಿದ್ದು, ಜಗತ್ತಿನ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ ತುಳುವರನ್ನು ತೌಳವ ಪ್ರಶಸ್ತಿ ನೀಡುವ ಮೂಲಕ ಗೌರವಿಸಲಾಯಿತು.
2021ರಲ್ಲಿ ವಿಶ್ವದಾದ್ಯಂತ ಕೊರೊನಾ 2ನೇ ಅಲೆಯ ರಣಕೇಕೆ ವೇಳೆ ಕರ್ನಾಟಕ ಲಾಕ್‌ಡೌನ್ ಆದ ಸಂದರ್ಭದಲ್ಲಿ ಮಂಗಳೂರಿನಲ್ಲಿ ನಿರಂತರವಾಗಿ 62 ದಿನಗಳ ಕಾಲ ಕೂಲಿ ಕಾರ್ಮಿಕರು, ನಿರ್ಗತಿಕರಿಗೆ ಅನ್ನದಾನ ಸೇವೆ ಮಾಡಿದ ಕೀರ್ತಿ ಶ್ರೀಯುತರ ಸಂಘಟನೆಗೆ ಸಲ್ಲುತ್ತದೆ. ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು 2020ರಲ್ಲಿ “ಯುವ ಸಾಧಕ” ಪ್ರಶಸ್ತಿ ನೀಡಿ ಗೌರವಿಸಿದ್ದು, ಜನ ಸೇವೆಯನ್ನು ಜನಾರ್ಧನನ ಸೇವೆಯಾಗಿಸಿರುವ ಶ್ರೀಯುತ ಯೋಗೀಶ್ ಶೆಟ್ಟಿ ಜಪ್ಪು ರವರಿಗೆ ಪ್ರತಿಷ್ಠಿತ ಕರ್ನಾಟಕ ಸರ್ಕಾರದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಾಪ್ತಿಯಾಗಿರುವ ನಿಮಿತ್ತ ಶ್ರೀ ಬಾಲಕೃಷ್ಣ ಮಂದಿರ ಕುಂಪಲದ ವತಿಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಂದಿರದ ಪದಾಧಿಕಾರಿಗಳಾದ ಮೋಹನ್ ಶೆಟ್ಟಿ, ಜಗದೀಶ್ ಆಚಾರ್ಯ, ಪ್ರದೀಪ್ ಚಂದ್ರ ಜಾಧವ್, ಪ್ರವೀಣ್ ಐ ಬಗಂಬಿಲ, ಅನಿಲ್ ಬಗಂಬಿಲ, ಸತ್ಯಪ್ರಸಾದ್ ಅಮೃತ ನಗರ, ದೀಕ್ಷಿತ್ ನಿಸರ್ಗ ಹಾಗೂ ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯರಾದ ರಾಘವ ಗಟ್ಟಿ ,ದಯಾನಂದ ತೊಕ್ಕೊಟ್ಟು ಮತ್ತಿತರರು ಉಪಸ್ಥಿತರಿದ್ದರು.