ಆಂದ್ರಪ್ರದೇಶ: ಕೂಲಿ ಕಾರ್ಮಿಕರನ್ನು ಕೊಂಡೊಯ್ಯುತ್ತಿದ್ದ ಆಟೋ ಒಂದರ ಮೇಲೆ ಹೈ ಟೆನ್ಶನ್ ವೈರ್ ಬಿದ್ದ ಪರಿಣಾಮ 8 ಮಂದಿ ಸಜೀವವಾಗಿ ದಹನವಾಗಿರುವ ಘಟನೆ ಆಂಧ್ರ ಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ತಾಡಿಮರ್ರಿ ವಲಯದ ಚಿಲ್ಲಕೊಂಡಯ್ಯಪಲ್ಲಿಯಲ್ಲಿ ಆಟೋ ಮೇಲೆ ಹೈ ಟೆನ್ಶನ್ ವಿದ್ಯುತ್ ತಂತಿ ಬಿದ್ದಿದ್ದು, ಆಟೋದಲ್ಲಿದ್ದ 8 ಮಂದಿಯೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಮೃತರನ್ನು ಗುಡ್ಡಂಪಲ್ಲಿ ನಿವಾಸಿಗಳು ಎಂದು ಗುರುತಿಸಲಾಗಿದ್ದು, ತಾಡಿಮರ್ರಿ ಮಂಡಲದ ಬುಡ್ಡಪಲ್ಲಿ ಗ್ರಾಮದ ಕೂಲಿ ಕಾರ್ಮಿಕರನ್ನು ಕೃಷಿ ಕೆಲಸಕ್ಕೆಂದು ಆಟೋದಲ್ಲಿ ಚಿಲ್ಲಕೊಂಡಯ್ಯಪಲ್ಲಿ ಕರೆಕೊಂಡು ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಅವಘಡ ನಡೆದ ಸಂದರ್ಭದಲ್ಲಿ ಆಟೋದಲ್ಲಿ 10ಕ್ಕೂ ಹೆಚ್ಚು ಜನರಿದ್ದರು ಎನ್ನಲಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹಲವು ದಿನಗಳಿಂದ ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಹೈ ಟೆನ್ಶನ್ ವೈರ್ಗಳು ಜೋತು ಬಿದ್ದಿದ್ದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಅವಘಡ ಸಂಭವಿಸಿದೆ ಎಂದು ಆರೋಪಿಸಲಾಗುತ್ತಿದೆ.