ನಡೆಯುವಾಗ ಅಥವಾ ಓಡುವಾಗ ಕಾಲು ಉಳುಕುವುದು ಸಾಮಾನ್ಯ ಸಂಗತಿ. ಕಾಲು ಯಾವಾಗ ಉಳುಕುತ್ತೆ ಅಂತಾ ಹೇಳೋಕೆ ಸಾಧ್ಯವಿಲ್ಲ. ಉಳುಕು ಕಣ್ಣಿಗೆ ಕಾಣದ ಬೇನೆ. ಕೆಲವರಿಗ ಊದಿಕೊಂಡು ಕೆಂಪಾದ್ರೆ ಮತ್ತೆ ಕೆಲವರಿಗೆ ಬರಿ ನೋವಷ್ಟೆ ಕಾಣಿಸಿಕೊಳ್ಳುತ್ತದೆ. ಆ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು.
ನಾಲ್ಕೈದು ದಿನ ಬೆಂಬಿಡದೆ ಕಾಡುವ ಈ ನೋವನ್ನು ಮನೆ ಮದ್ದಿನ ಮೂಲಕ ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು.
ಮಂಜುಗಡ್ಡೆ : ಕಾಲು ಉಳುಕಿದ ತಕ್ಷಣ ಮಂಜುಗಡ್ಡೆಯನ್ನು ಕಾಲಿನ ಮೇಲೆ ಇಟ್ಟುಕೊಳ್ಳಿ. ಇದ್ರಿಂದ ಕಾಲು ಊದಿಕೊಳ್ಳುವುದಿಲ್ಲ. ಹಾಗೆ ನೋವು ಕಡಿಮೆಯಾಗುತ್ತದೆ. ಮಂಜುಗಡ್ಡೆಯನ್ನು 1-2 ಗಂಟೆ ಬಿಟ್ಟು 20 ನಿಮಿಷ ಇಟ್ಟುಕೊಳ್ಳಿ.
ಅರಿಶಿನ : ಅರಿಶಿನ ಹಚ್ಚುವುದರಿಂದ ಕಾಲು ಊದಿಕೊಳ್ಳುವುದಿಲ್ಲ. 2 ಚಮಚ ಅರಿಶಿನಕ್ಕೆ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ. ಇದನ್ನು ಸ್ವಲ್ಪ ಬಿಸಿ ಮಾಡಿ ಉಳುಕಿದ ಜಾಗಕ್ಕೆ ಹಚ್ಚಿಕೊಳ್ಳಿ. ಎರಡು ಗಂಟೆ ಬಿಟ್ಟು ಬಿಸಿ ನೀರಿನಲ್ಲಿ ಕಾಲನ್ನು ತೊಳೆದುಕೊಳ್ಳಿ.
ಜೇನು ತುಪ್ಪ ಹಾಗೂ ಸುಣ್ಣ : ಜೇನುತುಪ್ಪ ಹಾಗೂ ಸುಣ್ಣವನ್ನು ಸರಿ ಪ್ರಮಾಣದಲ್ಲಿ ತೆಗೆದುಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಉಳುಕಿರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿಕೊಳ್ಳಿ. ಕೆಲವೇ ಗಂಟೆಯಲ್ಲಿ ನಿಮಗೆ ಆರಾಮ ಸಿಗುತ್ತದೆ.
ಅಲೋವೇರಾ : ಅಲೋವೇರಾದಲ್ಲಿ ಸಾಕಷ್ಟು ಔಷಧಿ ಗುಣಗಳಿವೆ. ಇದ್ರ ಪರಿಣಾಮ ಕೂಡ ಬೇಗ ಗೊತ್ತಾಗುತ್ತದೆ. ಉಳುಕಿದ ಜಾಗದಲ್ಲಿ ಅಲೋವೇರಾ ಹಚ್ಚಿ. ಸ್ವಲ್ಪ ಹೊತ್ತಿನಲ್ಲಿಯೇ ನೆಮ್ಮದಿ ಸಿಗಲಿದೆ.
ವೀಳ್ಯದೆಲೆ : ವೀಳ್ಯದೆಲೆ ಉಳುಕಿನ ಸಮಸ್ಯೆಗೆ ಬಹಳ ಉತ್ತಮ. ಹಾಗಾಗಿ ಸಾಸಿವೆ ಎಣ್ಣೆಗೆ ವೀಳ್ಯದೆಲೆ ಹಾಕಿ ಸ್ವಲ್ಪ ಬಿಸಿ ಮಾಡಿ ನಂತ್ರ ಉಳುಕಿದ ಜಾಗಕ್ಕೆ ಹಚ್ಚಿಕೊಳ್ಳಿ.