ಲಕ್ನೋ: ಮದುವೆ ಸಮಾರಂಭದಲ್ಲಿ ವಧು-ವರರು ಹಾರ ಬದಲಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಎಲ್ಲರ ಎದುರೇ ವರ, ವಧುವಿಗೆ ಖುಷಿಯಿಂದ ಮುತ್ತು ಕೊಟ್ಟಿದ್ದು, ಇದರಿಂದ ಕೋಪಗೊಂಡ ಯುವತಿ ಮದುವೆಯನ್ನೇ ರದ್ದು ಮಾಡಿರೋ ಅಪರೂಪದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಹೌದು, ನವೆಂಬರ್ 26 ರಂದು ಘಟನೆ ನಡೆದಿದ್ದು, ಉತ್ತರ ಪ್ರದೇಶದ ಸಂಭಾಲ್ ನಗರದಲ್ಲಿ ಮುಖ್ಯಮಂತ್ರಿಗಳ ಹೆಸರಿನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದೇ ಕಾರ್ಯಕ್ರಮದಲ್ಲಿ ಬಿಲ್ಸಿ ಗ್ರಾಮಕ್ಕೆ ಸೇರಿದ ಯುವಕ ಹಾಗೂ ಬಹ್ಜೋಯ್ ಪೊಲೀಸ್ ಠಾಣೆಗೆ ವ್ಯಾಪ್ತಿಯ ಗ್ರಾಮದ ಯುವತಿಯೂ ವೈವಾಹಿಕ ಜೀವನಕ್ಕೆ ಕಾಲಿಡಲು ಆಗಮಿಸಿದ್ದರು.
ವಿವಾಹ ಸಂಪ್ರಾದಾಯಗಳ ಅನ್ವಯ ವರ ವಧುವಿಗೆ ಹಾರ ಹಾಕಿದ ಬಳಿಕ ಮುತ್ತು ನೀಡಿದ್ದಾನೆ. ಇದರಿಂದ ಕೋಪಗೊಂಡ ಯುವತಿ ಮದುವೆಯನ್ನೇ ರದ್ದು ಮಾಡುವಂತೆ ಮಾಡಿದ್ದಾಳೆ. ಇದರಿಂದ ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಆ ಬಳಿಕ ಮದುವೆ ವಿಚಾರವಾಗಿ ಎರಡು ಕುಟುಂಬಗಳು ಪೊಲೀಸ್ ಠಾಣೆ ಮೆಟ್ಟೆಲೇರಿದೆ.
ಈ ವೇಳೆ ನಡೆದ ರಾಜಿಪಂಚಾಯಿತಿಯಲ್ಲಿ ಯುವತಿ ತಾನು ಯುವಕನನ್ನು ಮದುವೆ ಆಗುವುದೇ ಇಲ್ಲ ಎಂದು ಪಟ್ಟು ಹಿಡಿದ ಕಾರಣ ಕೊನೆಗೆ ಮದುವೆಯನ್ನೇ ರದ್ದು ಪಡಿಸಲಾಗಿದೆ. ಈ ಹಿಂದೆ ಚಿಕನ್, ಮಟನ್ ಊಟ ಹಾಕಿಲ್ಲ ಎಂದು ಮದುವೆ ರದ್ದಾದ ಘಟನೆಗಳು ವರದಿಯಾಗಿದ್ದವು. ಅಲ್ಲದೇ ಮದುವೆ ಊಟದಲ್ಲಿ ಹಪ್ಪಳ, ಸ್ವೀಟ್ ಕೊಡಲಿಲ್ಲ ಎಂದು ಕೂಡ ಜಗಳ ನಡೆದು ಮದುವೆ ರದ್ದಾಗಿರೋದು ಕಂಡಿದ್ದೇವೆ.
ಅಷ್ಟೇ ಏಕೆ ತಾಳಿ ಕಟ್ಟೋ ಕೊನೆ ಕ್ಷಣದಲ್ಲಿ ಯುವತಿ ಮದುವೆ ನಿರಾಕರಿಸಿ, ತಾನು ಬೇರೆ ಯುವಕನ್ನು ಪ್ರೀತಿ ಮಾಡ್ತಿದ್ದೀನಿ, ನನಗೆ ಈ ಯುವಕ ಇಷ್ಟವಿಲ್ಲ ಎಂದು ಕೂಡ ಮದುವೆಗಳು ರದ್ದಾಗಿವೆ. ಆದರೆ ಇದೇ ಮೊದಲ ಬಾರಿಗೆ ಭಾವಿ ಪತಿ ಅನುಮತಿ ಇಲ್ಲದೇ, ಎಲ್ಲರ ಎದುರು ಮುತ್ತು ಕೊಟ್ಟ ಎಂದು ವಧು ಮದುವೆಯನ್ನು ರದ್ದು ಪಡಿಸಿದ್ದು, ಈ ಸುದ್ದಿ ಕೇಳಿದ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡ್ತಿದ್ದಾರೆ.
