ಬೆಂಗಳೂರು : ರಾಜ್ಯದ ರೈತ ಸಮುದಾಯಕ್ಕೆ ರಾಜ್ಯ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಕೃಷಿಸಂಬಂಧ ಬೆಳೆ, ಕೀಟ ನಿಯಂತ್ರಣ ಕುರಿತು ಮಾಹಿತಿ ಹಾಗೂ ಮಣ್ಣು ಪರೀಕ್ಷೆಗಳನ್ನು ರೈತರ ಜಮೀನಿನ ಬಳಿಯೇ ಮಾಡುವ 100 ಕೃಷಿ ಸಂಜೀವಿನಿ ಸಂಚಾರಿ ವಾಹನಗಳ ಸೇವೆಯನ್ನು ಮಾರ್ಚ್ ತಿಂಗಳೊಳಗೆ ನೀಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ಈ ಕುರಿತು ಮಾಹಿತಿ ನೀಡಿರುವ ಸಚಿವ ಬಿ.ಸಿ.ಪಾಟೀಲ್, ಕೃಷಿಸಂಬಂಧ ಬೆಳೆ, ಕೀಟ ನಿಯಂತ್ರಣ ಕುರಿತು ಮಾಹಿತಿ ಹಾಗೂ ಮಣ್ಣು ಪರೀಕ್ಷೆಗಳನ್ನು ರೈತರ ಜಮೀನಿನ ಬಳಿಯೇ ಮಾಡುವ ಕೃಷಿ ಸಂಜೀವಿನ ಯೋಜನೆಯನ್ನು ಕೊಪ್ಪಳ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಕೃಷಿ ಸಂಜೀವಿನಿ ವಾಹನಗಳ ಸೇವೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಒಟ್ಟು 164 ‘ಕೃಷಿ ಸಂಜೀವಿನಿ’ ವಾಹನಗಳ ಖರೀದಿಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ. 100 ವಾಹನಗಳನ್ನು ಮಾರ್ಚ್ ಅಂತ್ಯದೊಳಗೆ ತಾಲ್ಲೂಕುಗಳಿಗೆ ನೀಡಲಾಗುವುದು ಎಂದು ಹೇಳಿದರು.