Thursday, March 28, 2024
spot_img
More

    Latest Posts

    ಹಿರಿಯ ನಾಗರಿಕರಿಗೆ ಗುಡ್‌ ನ್ಯೂಸ್‌ ;ಅಂಚೆ ಕಚೇರಿಗೆ ತೆರಳದೆಯೂ ನಡೆಸಬಹುದು ವ್ಯವಹಾರ!

    ಹಿರಿಯ ನಾಗರಿಕರಿಗೆ ಭಾರತೀಯ ಅಂಚೆ ಇಲಾಖೆ ಗುಡ್‌ ನ್ಯೂಸ್‌ ನೀಡಿದೆ. ಇನ್ನು ಮುಂದೆ ಹಿರಿಯ ನಾಗರಿಕರು ವಿವಿಧ ಉಳಿತಾಯ ಯೋಜನೆ, ಉಳಿತಾಯ ಖಾತೆ ಇತ್ಯಾದಿಗಳಿಂದ ಹಣ ಡ್ರಾ ಮಾಡಲು ಅಂಚೆ ಕಚೇರಿಗೆ ಭೇಟಿ ನೀಡಬೇಕಾದ ಅಗತ್ಯವಿಲ್ಲ.

    ಹಿರಿಯ ನಾಗರಿಕರು ಈಗ ತಮ್ಮ ಬದಲಿಗೆ ವ್ಯವಹಾರ ನಡೆಸಲು ʼಅಧಿಕೃತ ಪ್ರತಿನಿಧಿʼಯನ್ನು ಕಳುಹಿಸಬಹುದು. ಈ ಅಧಿಕೃತ ಪ್ರತಿನಿಧಿ ಹಿರಿಯ ನಾಗರಿಕರ ಪರವಾಗಿ ವಿತ್‌ಡ್ರಾ, ಕ್ಲೋಸ್‌ ಅಥವಾ ಅವಧಿಗೂ ಮುನ್ನ ಹಣವನ್ನು ಹಿಂಪಡೆಯಬಹುದು. ಇಲ್ಲಿಯ ತನಕ ಹಿರಿಯ ನಾಗರಿಕರಿಗೆ ಇಂಥದೊಂದು ಅವಕಾಶ ಇರಲಿಲ್ಲ. ಆದ್ರೆ ಆಗಸ್ಟ್‌ 4, 2021ರಂದು ಹೊರಡಿಸಿರೋ ಸುತ್ತೋಲೆಯಲ್ಲಿ ಅಂಚೆ ಇಲಾಖೆ ಇಂಥದೊಂದು ಅವಕಾಶ ನೀಡಿದೆ. ಆದ್ರೆ ತಮ್ಮ ಪ್ರತಿನಿಧಿಯನ್ನು ನೇಮಕ ಮಾಡಲು ಹಿರಿಯ ನಾಗರಿಕರು ಕೆಲವೊಂದು ಪ್ರಕ್ರಿಯೆಗಳನ್ನು ಅನುಸರಿಸೋದು ಅಗತ್ಯ.

    ಅನುಸರಿಸಬೇಕಾದ ಪ್ರಕ್ರಿಯೆಗಳು
    ಹಂತ1: ಖಾತೆಯಲ್ಲಿರೋ ಹಣ ಹಿಂಪಡೆಯಲು, ಸಾಲ ಮರುಪಾವತಿ ಅಥವಾ ಖಾತೆ ಅಂತ್ಯಗೊಳಿಸೋದು ಮುಂತಾದ ಕಾರ್ಯಗಳಿಗೆ ಖಾತೆದಾರರು ಎಸ್‌ಬಿ-12 ಅರ್ಜಿ ಭರ್ತಿ ಮಾಡಿ ಸಲ್ಲಿಸಬೇಕು. ಎಸ್‌ಬಿ-12  ಅಂಚೆ ಕಚೇರಿಯ ಹಿರಿಯ ಗ್ರಾಹಕನಿಗೆ ತನ್ನ ಖಾತೆ ನಿರ್ವಹಣೆಗೆ ಅಧಿಕೃತ ಪ್ರತಿನಿಧಿಯನ್ನು ನೇಮಿಸಲು ಅವಕಾಶ ನೀಡುತ್ತದೆ. ಆದ್ರೆ ಪ್ರತಿನಿಧಿಯಾಗೋ ವ್ಯಕ್ತಿ ಅಕ್ಷರಸ್ಥನಾಗಿರೋದು ಕಡ್ಡಾಯ. ಜಂಟಿ ಖಾತೆ ಹೊಂದಿದ್ರೆ ಇಬ್ಬರೂ ಕೂಡ ಅಧಿಕೃತ ಪ್ರತಿನಿಧಿಯ ಸಹಿಯನ್ನು ದೃಢೀಕರಿಸಬೇಕು. ಅಧಿಕೃತ ಪ್ರತಿನಿಧಿಯು ಯಾವುದೇ ಕಾರಣಕ್ಕೂ ಏಜೆಂಟ್‌ ಅಥವಾ ಅಂಚೆ ಕಚೇರಿಯ ಯಾವುದೇ ವಿಭಾಗದಲ್ಲಿ ಕಾರ್ಯನಿರ್ವಹಿಸೋ ಸಿಬ್ಬಂದಿ ಆಗಿರಬಾರದು. 

    ಹಂತ 2: ಖಾತೆದಾರ ತನ್ನ ವ್ಯವಹಾರಕ್ಕೆ ಅನುಗುಣವಾಗಿ ನಿರ್ದಿಷ್ಟ ಅರ್ಜಿ ನಮೂನೆಗಳನ್ನು ಭರ್ತಿ ಮಾಡೋದು ಕಡ್ಡಾಯ. ಉದಾಹರಣೆಗೆ ಹಣ ಹಿಂಪಡೆಯಲು ಅರ್ಜಿ ನಮೂನೆ ಎಸ್‌ಬಿ-7 ಭರ್ತಿ ಮಾಡಬೇಕು. ಅದೇರೀತಿ ಖಾತೆ ಅಂತ್ಯಗೊಳಿಸಲು ಎಸ್‌ಬಿ-7ಬಿ ಬಳಸುತ್ತಾರೆ. ಈ ಅರ್ಜಿಗಳ ಜೊತೆಗೆ ಖಾತೆದಾರ ಹಾಗೂ ಅಧಿಕೃತ ಪ್ರತಿನಿಧಿಯ ಗುರುತು ಹಾಗೂ ವಿಳಾಸ ದೃಢೀಕರಣಕ್ಕೆ ಅಗತ್ಯ ದಾಖಲೆಯನ್ನು ದೃಢೀಕರಿಸಿ ನೀಡಬೇಕು. ಒಂದು ವೇಳೆ ಒಂದಕ್ಕಿಂತ ಹೆಚ್ಚು ವ್ಯವಹಾರಗಳನ್ನು ನಡೆಸಬೇಕಿದ್ರೆ ಕೆವೈಸಿ ದಾಖಲೆಗಳು ಹಾಗೂ ಫೋಟೋವನ್ನು ನೀಡಬೇಕು. ಆದ್ರೆ ಪ್ರತಿ ವ್ಯವಹಾರಕ್ಕೂ ಎಸ್‌ಬಿ-12 ಅರ್ಜಿ ನಮೂನೆ ಸಲ್ಲಿಸೋದು ಕಡ್ಡಾಯ. 

    ಹಂತ 3: ಅಧಿಕೃತ ಪ್ರತಿನಿಧಿ ವ್ಯವಹಾರ ನಡೆಸೋ ಸಂದರ್ಭದಲ್ಲಿ ಬ್ಯಾಂಕ್‌ಗೆ ಪಾಸ್‌ಪುಸ್ತಕ, ಎಸ್‌ಬಿ-12 ಅರ್ಜಿ ನಮೂನೆ, ಅಗತ್ಯ ವ್ಯವಹಾರದ ಅರ್ಜಿ ನಮೂನೆ (ಎಸ್ಬಿ-7/ಎಸ್‌ಬಿ-7ಬಿ ಇತ್ಯಾದಿ) ಜೊತೆಗೆ ಖಾತೆದಾರ ಮತ್ತು ಅಧಿಕೃತ ಪ್ರತಿನಿಧಿಯ ಕೆವೈಸಿ ದಾಖಲೆಗಳನ್ನು ಸಲ್ಲಿಸಬೇಕು.

    ಹಂತ 4:ಅಂಚೆ ಕಚೇರಿಯ ಸಿಬ್ಬಂದಿಗಳು ಖಾತೆದಾರನ ಸಹಿ ಅಧಿಕೃತ ಹೌದೋ ಅಲ್ಲವೋ ಎಂಬುದನ್ನು ಲಭ್ಯವಿರೋ ದಾಖಲೆಗಳ ಮೂಲಕ ಪರಿಶೀಲಿಸುತ್ತಾರೆ. ಬಳಿಕ ಅಲ್ಲಿನ ಮುಖ್ಯಸ್ಥರು ಇನ್ನೊಮ್ಮೆ ಸಹಿಯನ್ನು ಪರಿಶೀಲಿಸಿ ಅದು ಅವರ ಬಳಿಯಿರೋ ದಾಖಲೆಗಳಲ್ಲಿರೋ ಖಾತೆದಾರನ ಸಹಿಗೆ ಹೊಂದಿಕೆಯಾದ್ರೆ ಮಾತ್ರ ಹಣ ಬಿಡುಗಡೆ ಮಾಡುತ್ತಾರೆ. ಚೆಕ್‌ ಅಥವಾ ಅಂಚೆ ಕಚೇರಿಯಲ್ಲಿರೋ ಉಳಿತಾಯ ಖಾತೆಗೆ ಹಣ ಜಮಾ ಮಾಡೋ ಮೂಲಕ ವಿವಿಧ ಯೋಜನೆಗಳ ಹಣವನ್ನು ಪಾವತಿ ಮಾಡಲಾಗುತ್ತದೆ. ಒಂದು ವೇಳೆ ಉಳಿತಾಯ ಖಾತೆಯಿಂದ ಹಣ ವಿತ್‌ಡ್ರಾ ಮಾಡೋದಾದ್ರೆ ಮಾತ್ರ ನಗದು ರೂಪದಲ್ಲಿ ನೀಡುತ್ತಾರೆ.

    ಹೇಗೆ ನೆರವಾಗುತ್ತದೆ?
    -ಹಿರಿಯ ನಾಗರಿಕರಿಗೆ ಅನಾರೋಗ್ಯದ ಕಾರಣದಿಂದ ಅಂಚೆ ಕಚೇರಿ ತನಕ ಹೋಗಲು ಸಾಧ್ಯವಾಗದೇ ಇರಬಹುದು. ಇಂಥ ಸಮಯದಲ್ಲಿ ಈ ಹೊಸ ನೀತಿ ಅವರಿಗೆ ನೆರವಾಗುತ್ತದೆ.
    -ಕೊರೋನಾ ಆತಂಕದ ಈ ಸಮಯದಲ್ಲಿ ಹಿರಿಯ ನಾಗರಿಕರು ಜನ ಸೇರೋ ಸ್ಥಳಗಳಿಗೆ ಹೋಗೋದು ಅಷ್ಟೊಂದು ಸುರಕ್ಷಿತವಲ್ಲ. ಹೀಗಾಗಿ ಇದು ಹಿರಿಯರಿಗೆ ವರದಾನವಾಗಿದೆ.
    -ಅನಕ್ಷರಸ್ಥ ಅಥವಾ ಹೆಚ್ಚು ವಿದ್ಯಾವಂತರಲ್ಲದ ಜನರಿಗೆ ಅಂಚೆ ಇಲಾಖೆಯ ನೀತಿ, ನಿಯಮಗಳನ್ನು ಅರಿಯಲು ಕಷ್ಟವಾಗಬಹುದು. ಹೀಗಾಗಿ ಅನಕ್ಷರಸ್ಥ ಅಥವಾ ಹೆಚ್ಚಿನ ಶಿಕ್ಷಣ ಹೊಂದಿರದ ಹಿರಿಯರು ತಮ್ಮ ಪ್ರತಿನಿಧಿಯನ್ನು ನೇಮಿಸಿದ್ರೆ, ಆತ ವಿದ್ಯಾವಂತನಾಗಿರೋ ಕಾರಣ ನಿಯಮಗಳನ್ನು ಸರಿಯಾಗಿ ಅರ್ಥೈಸಿಕೊಂಡು ಅದರಂತೆ ಮುಂದುವರಿಯಲು ಸಾಧ್ಯವಾಗುತ್ತದೆ. 

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss