ಬ್ರಹ್ಮಾವರ: ಆರು ತಲೆಮಾರುಗಳಿಂದ ಯಕ್ಷಗಾನ ಗೊಂಬೆಯಾಟ ನಡೆಸುತ್ತಿರುವ ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಬೊಂಬೆಯಾಟ ಟ್ರಸ್ಟ್ ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ವಿಶಿಷ್ಟ ಕೊಡುಗೆಗಾಗಿ ಯಕ್ಷಗಾನ ಕಲಾರಂಗ ನೀಡುವ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿಗೆ ಆಯ್ಕೆಯಾಗಿದೆ.
ದೇಶ ವಿದೇಶಗಳಲ್ಲಿ ಈ ಕಲೆ ಪ್ರದರ್ಶಿಸಿರುವ ಸಂಸ್ಥೆ ಪರಂಪರೆಯ ಹಾಡುಗಾರಿಕೆ ಮತ್ತು ಅರ್ಥಗಾರಿಕೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಪ್ರಸಕ್ತ ಭಾಸ್ಕರ ಕೊಗ್ಗ ಕಾಮತ್ ನಿರ್ದೇಶಕರಾಗಿದ್ದು, ಉಪ್ಪಿನಕುದ್ರುವಿನಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಿಸಿ, ಬೇರೆ ಬೇರೆ ಕಲಾಪ್ರಕಾರಗಳಿಗೂ ಉಚಿತವಾಗಿ ನೀಡುತ್ತ ವಿವಿಧ ಕಲಾ ಸಂವರ್ಧನೆಗೆ ಅನುವು ಮಾಡಿಕೊಟ್ಟಿದ್ದಾರೆ. ಪ್ರಶಸ್ತಿಯು 50,000 ರೂ. ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದ್ದು, ನ.13ರಂದು ಮಂಗಳೂರಿನ ಟೌನ್‌ಹಾಲ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂಬುದಾಗಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.
