ನಿನ್ನೆ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದ್ದಂತ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸ್ವೀಕಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿತ್ತು. ಇದು ಅಧಿಕೃತವಾಗಿ ಸೋಷಿಯಲ್ ಮೀಡಿಯಾದಲ್ಲೂ ಪ್ರಕಟಿಸಲಾಗಿತ್ತು. ಆದ್ರೇ ಇಂದು ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಸ್ಥಗಿತಗೊಂಡಿಲ್ಲ.
ಪುನರಾರಂಭಿಸಲಾಗಿದೆ ಎಂಬುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಿನ್ನೆ ಅಚಾತುರ್ಯದಿಂದ ಇಲಾಖೆಯ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮಾಡುವವರಿಂದ ಗೃಹಲಕ್ಷ್ಮೀ ಯೋಜನೆಗೆ ತಾತ್ಕಾಲಿಕವಾಗಿ ನೋಂದಣಿ ಸ್ಥಗಿತಗೊಳಿಸಲಾಗಿದೆ ಎಂಬುದಾಗಿ ನಡೆದಿತ್ತು. ಈ ಪ್ರಮಾದಕ್ಕೆ ಬಗ್ಗೆ ವಿಷಾದ ವ್ಯಕ್ತ ಪಡಿಸುತ್ತೇನೆ ಎಂದರು.
ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಕ್ರಿಯೆ ಯಾವತ್ತೂ ಸ್ಥಗಿತಗೊಳ್ಳುವುದಿಲ್ಲ. ಅದು ನಿರಂತರವಾದಂತ ಪ್ರಕ್ರಿಯೆಯಾಗಿದೆ. ತಾಂತ್ರಿಕ ಸಮಸ್ಯೆಯಿಂದ ನೋಂದಣಿಗೆ ಸಮಸ್ಯೆಯಾಗಿತ್ತು. ಅದನ್ನು ಸರಿಪಡಿಸಲಾಗಿದೆ. ಈಗ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಕ್ರಿಯೆ ಪುನರಾರಂಭಗೊಂಡಿದೆ. ಇದು ನಿರಂತರವಾಗಿ ನಡೆಯುತ್ತಿರುತ್ತದೆ ಎಂದು ಹೇಳಿದ್ದಾರೆ.
ಅಂದಹಾಗೇ ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ರಾಜ್ಯದ ಕುಟುಂಬದ ಯಜಮಾನಿ ಮಹಿಳೆಯರಿಗೆ ಸರ್ಕಾರದಿಂದ ಪ್ರೋತ್ಸಾಹ ಧನವಾಗಿ 2000 ರೂ ಪ್ರತಿ ತಿಂಗಳು ಪಾವತಿಸಲಾಗುತ್ತದೆ. ಈ ಯೋಜನೆಯಡಿ ಈಗಾಗಲೇ ರಾಜ್ಯದ ಕೋಟ್ಯಂತರ ಮಹಿಳೆಯರ ಖಾತೆಗೆ ಆಗಸ್ಟ್ ತಿಂಗಳ ಹಣವನ್ನು ಸಂದಾಯ ಮಾಡಲಾಗಿದೆ. ಈಗ ಈ ಯೋಜನೆಗೆ ನೋಂದಣಿ ಪ್ರಕ್ರಿಯೆ ಮುಂದುವರೆದಿದೆ.