ಬೆಳ್ತಂಗಡಿ: ಬೆಳ್ತಂಗಡಿಯ ಮರೋಡಿ ಗ್ರಾಮದಲ್ಲಿ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟಕ್ಕೆ ಹಾಕಲಾಗಿದ್ದ ಬ್ಯಾನರ್ ಹರಿದ ಪ್ರಕರಣ ತೀವ್ರ ಸಂಚಲನಕ್ಕೆ ಕಾರಣವಾಗಿತ್ತು. ಬ್ಯಾನರ್ ಹರಿದವರು ಯಾರೇ ಆಗಿದ್ದರೂ ತಪ್ಪೊಪ್ಪಿಕೊಳ್ಳುವಂತೆ ವಿನಂತಿಸಲಾಗಿತ್ತು. ಹಾಗೂ ಜಿಲ್ಲೆಯುದ್ದಕ್ಕೂ ಆಕ್ರೋಶಕ್ಕೆ ಕಾರಣವಾಗಿತ್ತು. ಅದರಂತೆ ಘಟನೆ ನಡೆದ 24 ಗಂಟೆಯ ಒಳಗೆ ಬ್ಯಾನರ್ ಹರಿದ ಮೂವರು ಅಪ್ರಾಪ್ತರು ತಾವೇ ಬ್ಯಾನರ್ ಹರಿದಿರುವುದೆಂದು ತಪ್ಪೊಪ್ಪಿಕೊಂಡಿದ್ದಾರೆ.
ಇಂದು ಪೋಷಕರ ಸಹಿತ ಮರೋಡಿ ಪೊಸರಡ್ಕ ಶ್ರೀ ದೈವ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರಕ್ಕೆ ಆಗಮಿಸಿದ ಅಪ್ರಾಪ್ತ ಬಾಲಕರು ತಿಳಿಯದೆ ಈ ಕೆಲಸ ಮಾಡಿದ್ದೇವೆಯೆಂದು ಒಪ್ಪಿಕೊಂಡು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಯಕ್ಷಗಾನ ಬಯಲಾಟದ ಆಯೋಜಕರು ‘ಬ್ಯಾನರ್ ಹರಿದ ಮಕ್ಕಳು ಅಪ್ರಾಪ್ತರಾದ ಕಾರಣ ಅವರ ಭವಿಷ್ಯದ ದೃಷ್ಠಿಯಿಂದ ದೇವರಲ್ಲಿ ಪ್ರಾರ್ಥಿಸಿ.. ತಪ್ಪು ಕಾಣಿಕೆಯನ್ನು ಸಲ್ಲಿಸಿದ್ದೇವೆ. ಘಟನೆ ನಡೆದ 24 ಗಂಟೆಯೊಳಗೆ ಬ್ಯಾನರ್ ಹರಿದವರು ಯಾರು ಎಂಬುದು ತಿಳಿದು ಬಂದಿದ್ದು ಇದು ಶ್ರೀ ಗೆಜ್ಜೆಗಿರಿ ಹಾಗೂ ಪೊಸರಡ್ಕ ಕ್ಷೇತ್ರದ ಮಹಿಮೆಯನ್ನು ಮತ್ತೊಮ್ಮೆ ಸಾರಿದೆ’ ಎಂದರು.