ಮಂಗಳೂರು: ಸ್ಕೂಟರ್ ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು 1.340 ಕೆಜಿ ಗಾಂಜಾ ಸಹಿತ ವಶಕ್ಕೆ ಪಡೆದುಕೊಂಡಿದ್ದಾರೆ.
ಕೇರಳ ರಾಜ್ಯದ ವರ್ಕಾಡಿ ಗ್ರಾಮ ನಿವಾಸಿ ಮೊಹಮ್ಮದ್ ಹನೀಫ್ ಅಲಿಯಾಸ್ ಗೂಳಿ, ತಲಪಾಡಿ ಕೆ.ಸಿ.ರೋಡ್ ನಿವಾಸಿ ಹಬೀಬ್ (32), ಮಂಜೇಶ್ವರ, ಮೀಯಪದವು ನಿವಾಸಿ ನಸೀಬ್(19) ಬಂಧಿತ ಆರೋಪಿಗಳು.
ಮಂಗಳೂರಿನ ಮಂಜನಾಡಿ ಗ್ರಾಮದ ಊರು ಮನೆ ಕ್ರಾಸ್ ಎಂಬಲ್ಲಿ ಸ್ಕೂಟರೊಂದರಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಗಳೊಂದಿಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭ ವಾಹನ ತಪಾಸಣೆ ನಡೆಸಿದಾಗ ಸ್ಕೂಟರ್ ನಲ್ಲಿ 1 ಕೆಜಿ 340 ಗ್ರಾಂ ಗಾಂಜಾ ಪತ್ತೆಯಾಗಿದೆ. ತಕ್ಷಣ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಗಾಂಜಾ ಸಹಿತ ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.