ಉಡುಪಿ : ಸುರತ್ಕಲ್ ಟೋಲ್ ರದ್ದು ಮಾಡಿ ಅದರ ಶುಲ್ಕವನ್ನು ಹೆಜಮಾಡಿ ಟೋಲ್ ಜತೆ ವಿಲೀನ ಮಾಡಿರುವುದು ಅವೈಜ್ಞಾನಿಕವಾಗಿದೆ. ಟೋಲ್ ವಿಲೀನದಿಂದ ಜಿಲ್ಲೆಯ ಜನರ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರುತ್ತಿವೆ. ಕೂಡಲೇ ಈ ಗೊಂದಲವನ್ನು ಬಗೆಹರಿಸುವಂತೆ ಇಂದು ಶಾಸಕ ರಘುಪತಿ ಭಟ್ ಅವರು ದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಮನವಿ ಸಲ್ಲಿಸಿದರು.
ಉಡುಪಿ – ಚಿಕ್ಕಮಗಳೂರು ಸಂಸದೆ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಗುಜರಾತ್ ಚುನಾವಣೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಅವರ ದೆಹಲಿ ಕಚೇರಿ ಅಧಿಕಾರಿಗಳು ಹಾಗೂ ಆಪ್ತ ಕಾರ್ಯದರ್ಶಿ ಅವರೊಂದಿಗೆ ಸುರತ್ಕಲ್ ಟೋಲ್ ಸಮಸ್ಯೆ ಬಗ್ಗೆ ಚರ್ಚಿಸಲಾಗಿತ್ತು. ನಂತರ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ನಿತಿನ್ ಗಡ್ಕರಿ ಅವರ ಕಚೇರಿ ಅಧಿಕಾರಿಗಳನ್ನು ಭೇಟಿ ಮಾಡಿ ವಿಷಯ ಪ್ರಸ್ತಾಪಿಸಿ ಅವರಿಗೆ ಮನವರಿಕೆ ಮಾಡಲಾಯಿತು. ಬಳಿಕ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನು ಭೇಟಿಯಾಗಿ ಸುರತ್ಕಲ್ ಟೋಲ್ ಶುಲ್ಕವನ್ನು ಹೆಜಮಾಡಿ ಟೋಲ್ ಜತೆ ವಿಲೀನ ಮಾಡಿರುವುದರಿಂದ ಸ್ಥಳೀಯವಾಗಿ ಉಂಟಾಗುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. ಈ ವೇಳೆ ಮನವಿ ಸ್ವೀಕರಿಸಿದ ಸಚಿವ ನಿತಿನ್ ಗಡ್ಕರಿ ಅವರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳೊಂದಿಗೆ ಡಿ. 5 ರಂದು ಸಭೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.
