ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬುಧವಾರ ಐವತ್ತನೇ ವರ್ಷದ ಉಚಿತ ಸಾಮೂಹಿಕ ವಿವಾಹದ ಸಂಭ್ರಮ, ಸಡಗರ. ಸಂಜೆ ಗಂಟೆ 6. 50ರ ಗೋಧೂಪಳಿ ಲಗ್ನ ಸುಮುಹೂರ್ತದಲ್ಲಿ ಅಮೃತ ವರ್ಷಿಣಿ ಸಭಾಭವನದಲ್ಲಿ 183 ಜೊತೆ ವಧೂ- ವರರು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು.
ಬೆಳಿಗ್ಗೆ ಹೆಗ್ಗಡೆಯವರ ನಿವಾಸದಲ್ಲಿ ವಧುವಿಗೆ ಸೀರೆ ಮತ್ತು ರವಕೆ ಹಾಗೂ ವರನಿಗೆ ಧೋತಿ, ಶಾಲು ವಿತರಿಸಿದರು. ಸಂಜೆ 5 ಗಂಟೆಗೆ ಭವ್ಯ ಮೆರವಣಿಗೆಯಲ್ಲಿ ವಧೂ-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾಭವನ ದಲ್ಲಿ ಮದುವೆ ಮಂಟಪಕ್ಕೆ ಪ್ರವೇಶಿಸಿದರು. ಅಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮತ್ತು ಗಣ್ಯ ಅತಿಥಿಗಳು ಮಂಗಳಸೂತ್ರ ವಿತರಿಸಿ ಶುಭ ಹಾರೈಸಿದರು. 6. 50ರ ಗೋಧೂಳಿ ಲಗ್ನ ಸುಮೂಹರ್ತದಲ್ಲಿ ವೇದಘೋಷ, ಮಂತ್ರ, ಪಠಣ ದೊಂದಿಗೆ ಮಂಗಳವಾದ್ಯಗಳ ನಿನಾದದೊಂದಿಗೆ ಜಾತಿವಾರು ಸಂಪ್ರದಾಯದಂತೆ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಿ ಮಂತ್ರಾಕ್ಷತೆ, ಹಾರ ವಿನಿಮಯ ಹಾಗೂ ಮಾಂಗಲ್ಯ ಧಾರಣೆಯೊಂದಿ ಗೆ ವಿವಾಹ ನೆರವೇರಿಸಲಾಯಿತು. ನೂತನ ದಂಪತಿಗಳು ಪ್ರತಿಜ್ಞಾ ವಿಧಿ ಸ್ವೀಕರಿಅಇದರು. ಬಳಿಕ ನೂತನ ದಂಪತಿಗಳು ದೇವಸ್ಥಾನಕ್ಕೆ ಹೋಗಿ ದೇವರದರ್ಶನ ಪಡೆದು ಅನ್ನಪೂರ್ಣ ಭೋಜನಾಲಯದಲ್ಲಿ ಮದುವೆ ಊಟ ಸ್ವೀಕರಿಸಿ ತಮ್ಮ ಊರಿಗೆ ಮರಳಿದರು.
ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಕಂದಾಯ ಸಚಿವ ಆರ್. ಅಶೋಕ್, ಚಲನಚಿತ್ರ ನಟ ಗಣೇಶ್ ಶಾಸಕರಾದ ಕೃಷ್ಣಪ್ಪ, ಹರೀಶ್ ಪೂಂಜ, ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ವಧೂ ವರರನ್ನು ಆಶೀರ್ವದಿಸಿದರು. ಸರಳ ವಿವಾಹ ವನ್ನು ಪ್ರೋತ್ಸಾಹಿಸಬೇಕು ಎಂಬ ನೆಲೆಯಲ್ಲಿ 1972ರಲ್ಲಿ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ ವನ್ನು ಆರಂಭಿಸಲಾಯಿತು. ಕಳೆದ ವರ್ಷದವರೆಗೆ 12, 393 ಜೊತೆ ವಿವಾಹವಾಗಿದ್ದು ಈ ವರ್ಷ ಸೇರಿ 12, 576 ಜೋಡಿಗಳು ವಿವಾಹವಾಗಿದ್ದಾರೆ. ಒಟ್ಟು 183 ಜೊತೆಯಲ್ಲಿ 60 ಜೊತೆ ಅಂತರ್ಜಾತೀಯ ವಿವಾಹವಾಗಿರುತ್ತಾರೆ. ತಮ್ಮ ವಿವಾಹದ ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆ ದಂಪತಿಯನ್ನು ಆರತಿ ಬೆಳಗಿ ಗೌರವಿಸಲಾಯಿತು. ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಗಣೇಶ್ ಕಾಮತ್ ಧನ್ಯವಾದವಿತ್ತರು. ಬಾರಕೂರಿನ ದಾಮೋದರ ಶರ್ಮಾ ಕಾರ್ಯಕ್ರಮ ನಿರ್ವಹಿಸಿದರು.

