ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಇಂದು ಬೆಳಗ್ಗೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪ ರಸ್ತೆಬದಿ ಆಶ್ರಯ ಪಡೆದಿದ್ದವರ ಮೇಲೆ ಮತ್ತೊಂದು ಕಾಡಾನೆ ದಾಳಿಗೈದು, ದಂಪತಿ ಸೇರಿದಂತೆ ಮತ್ತೊರ್ವ ಸಾವಿನಿಂದ ಪಾರಾದ ಘಟನೆ ಬೆಳಕಿಗೆ ಬಂದಿದೆ
ಈ ಹಿಂದೆ ತರೀಕೆರೆ ತಾಲೂಕಿನಲ್ಲಿ ಹೊಲದಲ್ಲಿ ರಾಗಿ ಕಾಯುತ್ತಾ ಮಲಗಿದ್ದ ರೈತನ ಮೇಲೆ ಕಾಡಾನೆ ದಾಳಿ ಒಳಗಾಗಿ ಸಾವನ್ನಪ್ಪಿ 24 ಗಂಟೆಯೂ ಆಗಿರಲಿಲ್ಲ ಈ ಬೆನ್ನಲ್ಲೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದ, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಗರೆ ಮೂಲದ ನಾಗವಲ್ಲಿ ಹಾಗೂ ಗಂಡುಗುಸೆ ಎಂಬ ದಂಪತಿ ಕೂಲಿ ಕೆಲಸಕ್ಕೆಂದು ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮಕ್ಕೆ ಬಂದಿದ್ದರು. ಬಣಕಲ್ ಗ್ರಾಮದ ಪಶು ಆಸ್ಪತ್ರೆ ಬಳಿ ಟೆಂಟ್ ಹಾಕಿಕೊಂಡು ಮಲಗಿದ್ದಾಗ ಕಾಡಾನೆ ದಾಳಿ ಮಾಡಿದೆ. ಅದೃಷ್ಟವಶಾತ್ ದಂಪತಿ ಹಾಗೂ ಮತ್ತೊಬ್ಬರು ಒಟ್ಟು ಮೂವರು ಸಾವಿನಿಂದ ಪಾರಾಗಿದ್ದಾರೆ
ನಾಗವಲ್ಲಿ ಹಾಗೂ ಗಂಡುಗುಸೆ ದಂಪತಿಗೆ ತೀವ್ರ ಗಾಯವಾಗಿದ್ದು, ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಗವಲ್ಲಿಗೆ ಸೊಂಟದ ಭಾಗಕ್ಕೆ ತೀವ್ರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಮೇಲಿಂದ ಮೇಲೆ ಕಾಡಾನೆಗಳ ಹಾವಳಿ ಹೆಚ್ಚುತ್ತಿದ್ದರೂ ಆನೆ ಹಾವಳಿ ಬಗ್ಗೆ ಸೂಕ್ತ ಕ್ರಮಕೈಗೊಳ್ಳದ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಕಾಡಾನೆಗಳ ಹಾವಳಿಗೆ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ. ಕಾಡಾನೆಗಳ ದಾಳಿಯಿಂದ ಮನೆಯಿಂದ ಆಚೆ ಬರೋದಕ್ಕೆ ಭಯವಾಗುತ್ತಿದೆ . ಈ ಬಗ್ಗೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
