ಪುತ್ತೂರು: ಚಿಕ್ಕಮುಟ್ನೂರು ಗ್ರಾಮದ ಸಿದ್ಯಾಲದ ಗುಡ್ಡದಲ್ಲಿ ಶುಕ್ರವಾರ ಹುಲ್ಲು ಕಟಾವು ಮಾಡುತ್ತಿದ್ದ ವೇಳೆ ತೆಂಗಿನ ಮರದ ಬುಡದಲ್ಲಿ ಮಾನವ ತಲೆಬುರುಡೆ, ಅಸ್ಥಿಪಂಜರ ಪತ್ತೆಯಾದ ಸ್ಥಳಕ್ಕೆ ಮಂಗಳೂರು ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಭೇಟಿ ನೀಡಿ ಪರಿಶೀಲಿಸಿದೆ.
ಸಿದ್ಯಾಲ ದಿ| ಜೀವನ್ ಭಂಡಾರಿಅವರಿಗೆ ಸೇರಿದ ಜಮೀನನ್ನು ಕೆಮ್ಮಾಯಿ ನಿವಾಸಿ ಶಿವಾನಂದ ನಾಯಕ್ ನೋಡಿಕೊಳ್ಳುತ್ತಿದ್ದರು. ತೋಟದ ಮತ್ತು ಗುಡ್ಡೆಯಲ್ಲಿ ಬೆಳೆದಿರುವ ಹುಲ್ಲನ್ನು ಕಟಾವು ಮಾಡಿಸುತ್ತಿದ್ದು, ಅ.21ರಂದು ಕೆಲಸ ನಿರ್ವಹಿಸುತ್ತಿದ್ದ ವೇಳೆ ಪಾಳು ಬಿದ್ದ ತೆಂಗಿನ ಬುಡದಲ್ಲಿ ಮಾನವನ ತಲೆ ಬುರುಡೆ ಮತ್ತು ಅಸ್ಥಿಪಂಜರ ಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಂಗಳೂರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮಾಹಿತಿ ನೀಡಿದರು.
7 ತಿಂಗಳ ಹಿಂದೆ ಕೇಪುಳು ತಾರಿಗುಡ್ಡೆ ನಿವಾಸಿ ವೃದ್ಧ ಯೂಸುಫ್ ನಾಪತ್ತೆಯಾದ ಬಗ್ಗೆ ಅವರ ಸಹೋದರ ಪೊಲೀಸರಿಗೆ ದೂರು ನೀಡಿದ್ದರು. ಅವರು ಈ ತನಕ ಪತ್ತೆಯಾಗಿಲ್ಲ. ಸಿದ್ಯಾಲದಲ್ಲಿ ದೊರೆತಿರುವ ತಲೆಬುರಡೆ, ಅಸ್ಥಿಪಂಜರ ನಾಪತ್ತೆಯಾಗಿರುವ ವ್ಯಕ್ತಿಯದ್ದೆ ಎನ್ನುವ ಶಂಕೆ ಮೂಡಿದ್ದು ಡಿಎನ್‌ಎ ಪರೀಕ್ಷೆಯ ಬಳಿಕ ಸ್ಪಷ್ಟವಾಗಲಿದೆ.
