ಬೆಂಗಳೂರು : ನಿನ್ನೆ ಬೆಳಗ್ಗೆ ನಡುರಸ್ತೆಯಲ್ಲೇ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಅವರನ್ನು ಹತ್ಯೆ ಮಾಡಲಾಗಿತ್ತು. ಆ ಕೊಲೆಯ ಹಂತಕರಿಗಾಗಿ ಹುಡುಕಾಟ ನಡೆಸಿದ್ದ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳ ಮೇಲೆ ಇಂದು ಫೈರಿಂಗ್ ಮಾಡಿದ್ದಾರೆ. ರೇಖಾ ಕದಿರೇಶ್ ಕೊಲೆ ಆರೋಪಿಗಳಾದ ಪೀಟರ್ ಹಾಗೂ ಸೂರ್ಯನ ಕಾಲಿಗೆ ಗುಂಡು ಹಾರಿಸಿ, ಬಂಧಿಸಲಾಗಿದೆ.ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಫೈರಿಂಗ್ ನಡೆದಿದ್ದು, ಆರೋಪಿಗಳನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಮಾರಕಾಸ್ತ್ರಗಳಿಂದ ಹಲ್ಲೆ ಮುಂದಾದ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ, ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಕಾಮಾಕ್ಷಿಪಾಳ್ಯದ ದೇವಸ್ಥಾನ ಸಮೀಪ ತಲೆಮರೆಸಿಕೊಂಡಿದ್ದ ಆರೋಪಿಗಳು ಈಗ ಗುಂಡೇಟಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಅವರ ಹೊಟ್ಟೆ ಭಾಗಕ್ಕೆ 8 ಬಾರಿ ಇರಿದಿದ್ದ ಸೂರ್ಯ ಬಳಿಕ ಪರಾರಿಯಾಗಿದ್ದ. ಅವರ ಕತ್ತಿನ ಭಾಗಕ್ಕೆ ನಾಲ್ಕು ಬಾರಿ ಇರಿದಿದ್ದ ಪೀಟರ್ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ರೇಖಾ ಅವರ ಕತ್ತು ಹಾಗೂ ಹೊಟ್ಟೆ ಭಾಗಕ್ಕೆ ಸುಮಾರು 12 ಬಾರಿ ಇರಿದು ಕೊಲೆ ಮಾಡಲಾಗಿತ್ತು. ರೇಖಾ ಅವರನ್ನು ಕಚೇರಿಯಿಂದ ಹೊರಗೆ ಕರೆದುಕೊಂಡು ಬಂದಿದ್ದು ಕೂಡ ಇದೇ ಪೀಟರ್. ಹೊರಗೆ ಬಂದ ರೇಖಾ ಅವರ ಮೇಲೆ ಮನಬಂದಂತೆ ಇರಿದು, ಕತ್ತು ಸೀಳಿ ಕೊಲೆ ಮಾಡಲಾಗಿತ್ತು.
ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ1 ಆರೋಪಿ ಸೂರ್ಯ, ಎ 2 ಆರೋಪಿ ಪೀಟರ್ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು. ಕೊಲೆ ಮಾಡಿದ ಮೂವರು ಪ್ರಮುಖ ಆರೋಪಿಗಳಲ್ಲಿ ಓರ್ವನನ್ನು ವಶಕ್ಕೆ ಪಡೆದಿದ್ದ ಪೊಲೀಸರಿಗೆ ಪೀಟರ್ ಮತ್ತು ಸೂರ್ಯ ಇರುವ ಜಾಗ ಗೊತ್ತಾಗಿತ್ತು. ನಿನ್ನೆ ಇನ್ನು 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವುದಾಗಿ ಸಿಎಂ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದರು. ಅದರಂತೆ ಕೊಲೆ ನಡೆದು ಒಂದೇ ದಿನದೊಳಗೆ ಎಲ್ಲ ಆರೋಪಿಗಳೂ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರಿನಲ್ಲಿ ಚಲವಾದಿಪಾಳ್ಯದ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಮೇಲೆ ಗುರುವಾರ ಬೆಳಗ್ಗೆ ಲಾಂಗು, ಮಚ್ಚಿನಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಚಾಕುವಿನಿಂದ ಕುತ್ತಿಗೆ ಸೀಳಿ ಹಲ್ಲೆ ನಡೆಸಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ಮಾಜಿ ಕಾರ್ಪೋರೇಟರ್ ರೇಖಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಚಲವಾದಿಪಾಳ್ಯ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಇಂದು ಬೆಳಗ್ಗೆ ಕಚೇರಿಯಿಂದ ಹೊರಗೆ ಬರುತ್ತಿದ್ದಂತೆ ಲಾಂಗು, ಮಚ್ಚಿನಿಂದ ಹಲ್ಲೆ ನಡೆಸಲಾಗಿತ್ತು. ರೇಖಾ ಕದಿರೇಶ್ ಕಚೇರಿ ಮುಂದೆಯೇ ಹಲ್ಲೆ ಮಾಡಿದ ಆರೋಪಿಗಳು ಎಸ್ಕೇಪ್ ಆಗಿದ್ದರು. ರೇಖಾ ಅವರ ಸಂಬಂಧಿ ಪೀಟರ್ ಹಾಗೂ ಸುರೇಶ್ ಎಂಬಾತನಿಂದ ಹಲ್ಲೆ ನಡೆದಿತ್ತು. ಕೊಲೆ ಮಾಡುವ ಉದ್ದೇಶದಿಂದಲೇ ಹಲ್ಲೆ ನಡೆಸಿದ್ದ ಅವರು ಬಳಿಕ ಪರಾರಿಯಾಗಿದ್ದರು. ಇನ್ನೂ ವಿಪರ್ಯಾಸವೆಂದರೆ, ಈ ಮೊದಲು ರೇಖಾ ಅವರ ಗಂಡ ಕದಿರೇಶ್ ಅವರನ್ನು ಕೂಡ 3 ವರ್ಷಗಳ ಹಿಂದೆ ಕೊಲೆ ಮಾಡಲಾಗಿತ್ತು.
ಮುಂಜಾನೆಯಿಂದಲೇ ಆಕೆಯ ಚಲನವಲನಗಳ ಮೇಲೆ ಮೂವರು ಕೊಲೆಗಾರರು ಕಣ್ಣಿಟ್ಟಿದ್ದರು. ಮುಂಜಾನೆ 8 ಗಂಟೆಯಿಂದಲೂ ಆಕೆಯ ಚಲನವಲನಗಳನ್ನು ಗಮನಿಸುತ್ತಿದ್ದರು. ಬೆಳಗ್ಗೆ ರೇಖಾ ಕದಿರೇಶ್ ಊಟ ಕೊಡುವಾಗಲೂ ಕಚೇರಿಯ ಬಳಿಯೇ ಸುತ್ತಾಡಿದ್ದ ಕೊಲೆಗಾರರು ಯಾರಿಗೂ ಅನುಮಾನ ಬಾರದ ಹಾಗೆ ಸಿಸಿ ಟಿವಿ ಕ್ಯಾಮರಾಗಳನ್ನು ಡೈವರ್ಟ್ ಮಾಡಿದ್ದರು. ಮೂರು ಸಿಸಿ ಕ್ಯಾಮರಾಗಳನ್ನು ವಿಶುವಲ್ ಕಾಣದ ಹಾಗೆ ಡೈವರ್ಷನ್ ಮಾಡಿದ್ದರು. ನಿನ್ನೆ ಬೆಳಗ್ಗೆ ಸುಮಾರು 8.30ರ ವೇಳೆಗೆ ಫುಡ್ ಕಿಟ್ ಹಂಚಿಕೆ ಆದ ಬಳಿಕ ಮನೆಗೆ ಹೋಗಿದ್ದ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ 9:30ರ ಸುಮಾರಿಗೆ ಮತ್ತೆ ಕಚೇರಿಯತ್ತ ಬಂದಿದ್ದರು. ಕಚೇರಿಗೆ ಬಂದ ಕೂಡಲೆ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಶುರು ಮಾಡಿದ್ದರು. ಈ ವೇಳೆ ಆರೋಪಿ ಪೀಟರ್ ರೇಖಾ ಕದಿರೇಶ್ ಜೊತೆ ಮಾತನಾಡಲು ಬಂದಿದ್ದ. ಸುಮಾರು 10 ನಿಮಿಷಗಳು ಮಾತನಾಡಿ ಆಕೆಯನ್ನು ಹೊರಗಡೆ ಕರೆದುಕೊಂಡು ಬಂದಿದ್ದ.
ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹೊರಗಡೆ ಬರುತ್ತಿದ್ದಂತೆ ತನ್ನ ಬಳಿ ಇದ್ದ ಚಾಕುವಿನಿಂದ ಆಕೆಯ ಕುತ್ತಿಗೆ ಸೀಳಿದ್ದ. ತಕ್ಷಣವೇ ಆತನ ಜೊತೆ ಬಂದಿದ್ದ ಮತ್ತಿಬ್ಬರು ಚಾಕುವಿನಿಂದ ಹಲ್ಲೆ ಮಾಡಿದ್ದರು. ರೇಖಾ ತಪ್ಪಿಸಿಕೊಳ್ಳಲು ಸುಮಾರು 100 ಮೀಟರ್ ದೂರ ಓಡಿದರೂ ಬಿಡದೆ ಆಕೆಯನ್ನು ಸುತ್ತುವರೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಆಕೆಯ ಕುತ್ತಿಗೆ, ತಲೆ ಭಾಗಕ್ಕೆ ತೀವ್ರವಾಗಿ ಹಲ್ಲೆ ಮಾಡಿದ್ದ ಹಂತಕರು ಗಲಾಟೆ ಕೇಳಿ ಸ್ಥಳೀಯರು ಸುತ್ತುವರೆಯುವಷ್ಟರಲ್ಲಿ ಅಲ್ಲಿಂದ ಪರಾರಿಯಾಗಿದ್ದರು. ಇದೀಗ ಆ ಇಬ್ಬರೂ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
©2021 Tulunada Surya | Developed by CuriousLabs