ಉಪ್ಪಳ: ಭಾರೀ ಬಡ್ಡಿಯ ಭರವಸೆಯೊಡ್ಡಿ ಠೇವಣೆದಾರರಿಂದ ಸಂಗ್ರಹಿಸಿದ ಕೋಟ್ಯಾಂತರ ರೂಪಾಯಿಗಳನ್ನು ಲಪಟಾಯಿಸಿ ತಲೆಮರೆಸಿಕೊಂಡ ಬದಿಯಡ್ಕದ ರೋಯಲ್ ಟ್ರಾವಂಕೂರ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪೆನಿ ಲಿಮಿಟೆಡ್‌ನ ಉಪ್ಪಳ ಶಾಖೆಯಲ್ಲೂ ಭಾರೀ ವಂಚನೆ ನಡೆದು ಶಾಖೆಯನ್ನು ಮುಚ್ಚುಗಡೆಗೊಳಿಸಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಉಪ್ಪಳ ಶಾಖೆಯ ಎಂಟು ಮಂದಿ ಸಿಬ್ಬಂದಿಗಳು ನಮಗೆ ಹಾಗೂ ಗ್ರಾಹಕರಿಗೆ ಮಾಡಿದ ವಂಚನೆ ವಿರುದ್ದ ಮಂಜೇಶ್ವರ ಪೋಲೀಸರಿಗೆ ದೂರು ನೀಡಿದ್ದಾರೆ. ಕಳೆದ ಒಂದೂವರೆ ವರ್ಷದ ಹಿಂದೆ ಉಪ್ಪಳದಲ್ಲಿ ಶಾಖೆಯನ್ನು ಆರಂಭಿಸಲಾಗಿದೆ. ಸುಮಾರು 20ಲಕ್ಷಕ್ಕೂ ಹೆಚ್ಚು ರೂಪಾಯಿಗಳನ್ನು ಬಡ ಜನರಿಂದ ಪಿಗ್ಮಿ ಸಂಗ್ರಹ ಮಾಡಿದ್ದಾರೆ. ಬದಿಯಡ್ಕ ಶಾಖೆಯಲ್ಲಿ ವಂಚನೆ ನಡೆದಿರುವ ಬಗ್ಗೆ ಮಾಹಿತಿ ತಿಳಿದು ಉಪ್ಪಳ ಶಾಖೆಯ ಗ್ರಾಹಕರು ಪಿಗ್ಮಿಯ ಹಣವನ್ನು ಪಡೆಯಲು ತಲುಪುತ್ತಿದ್ದು, ಆದರೆ ದಿನನಿತ್ಯದ ಸಂಗ್ರಹಗೊಂಡ ಹಣವನ್ನು ಮಾಲಕನ ಖಾತೆಗೆ ಜಮಾ ಮಾಡುವುದರಿಂದ ಶಾಖೆಯಲ್ಲಿ ಹಣ ಬಾಕಿಯಿರುದಿಲ್ಲ. ಹಲವು ತಿಂಗಳುಗಳಿಂದ ವೇತನ ಲಭಿಸಿಲ್ಲವೆಂದು ಸಿಬ್ಬಂದಿ ವರ್ಗ ತಿಳಿಸಿದ್ದಾರೆ. ಹಣ ಹಿಂಪಡೆಯಲು ಗ್ರಾಹಕರು ತಲುಪುತ್ತಿರುವುದರಿಂದ ಆತಂಕಗೊಂಡು ಕಚೇರಿಯನ್ನು ಮುಚ್ಚಲಾಗಿದೆ. ಇತ್ತೀಚೆಗೆ ಮಂಗಳೂರು ಕಚೇರಿಗೆ ಮಾಲಕ ತಲುಪಿದ್ದು ಈ ವೇಳೆ ಎಲ್ಲಾ ಶಾಖೆಗಳ ಸಿಬ್ಬಂದಿ ವರ್ಗದವರು ಭೇಟಿ ಮಾಡಿ ಹಣಕ್ಕಾಗಿ ಒತ್ತಾಯಿಸಿದ್ದರು. ಕೆಲವೇ ದಿನಗಳಲ್ಲಿ ಮೊತ್ತವನ್ನು ಕೊಡುವ ಭರವಸೆಯನ್ನು ನೀಡಿದೆನ್ನಲಾಗಿದೆ. ಭರವಸೆಯನ್ನು ಈಡೇರಿಸದಿದ್ದಲ್ಲಿ ಎಲ್ಲಾ ಶಾಖೆಗಳ ಸಿಬ್ಬಂದಿಗಳು ಒಟ್ಟು ಸೇರಿ ಕಣ್ನೂರಿನಲ್ಲಿರುವ ಪ್ರಧಾನ ಕಚೇರಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗುವುದಾಗಿ ಸಿಬ್ಬಂದಿಗಳು ತಿಳೀಸಿದ್ದಾರೆ.