ಜೈಪುರ: ತಂದೆ ಮತ್ತು ಮಗನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದ್ದು, ಈ ವೇಳೆ ನಿರ್ಲಕ್ಷ್ಯ ತೋರಿದ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾದ ಘಟನೆ ರಾಜಸ್ಥಾನದ ಭರತ್‍ಪುರದಲ್ಲಿ ನಡೆದಿದೆ.
ಸುರೇಂದ್ರ ಸಿಂಗ್(46) ಮತ್ತು ಮಗ ಸಚಿನ್(17) ಮೃತ ದುರ್ದೈವಿಗಳು. ಭಾನುವಾರ ರಾಜಸ್ಥಾನದ ಭರತ್‍ಪುರ ಜಿಲ್ಲೆಯಲ್ಲಿ ಸುರೇಂದ್ರ ಸಿಂಗ್ ಅವರ ನಿವಾಸದ ಮುಂದೆಯೇ ಈ ಘಟನೆ ನಡೆದಿದ್ದು, ತಂದೆ ಮಗನ ಚಿಕಿತ್ಸೆ ಘಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅದು ಅಲ್ಲದೇ ಇವರಿಬ್ಬರ ಮೇಲೆ ಗುಂಡು ಹಾರಿಸಿದ್ದ ದಿಲಾವರ್ ಎಂಬವರ ಕಾಲಿಗೆ ಗುಂಡು ತಗುಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ರಾತ್ರಿ ಸುರೇಂದ್ರ ಸಿಂಗ್ ಮತ್ತು ಲಖನ್ ಶರ್ಮಾ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಸಿಂಗ್ ಅವರು ಲಖನ್ ಕಪಾಳಕ್ಕೆ ಹೊಡೆದಿದ್ದಾರೆ. ಈ ವೇಳೆ ಅಲ್ಲೇ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಕೊತ್ವಾಲಿ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್ ವಿಜಯ್ ಪಾಲ್ ಮತ್ತು ಹೆಡ್ ಕಾನ್‍ಸ್ಟೆಬಲ್ ಮಾನ್ ಸಿಂಗ್ ಸ್ಥಳಕ್ಕೆ ಆಗಮಿಸಿ ಇಬ್ಬರನ್ನು ಸಮಾಧಾನಪಡಿಸಿದ್ದು, ಅಲ್ಲಿಂದ ಕಳುಹಿಸಿದ್ದಾರೆ.
ಮರುದಿನ ಭಾನುವಾರ ಬೆಳಗ್ಗೆ ಸುಭಾಷ್‍ನಗರದಲ್ಲಿರುವ ಸುರೇಂದ್ರ ಸಿಂಗ್ ಅವರ ಮನೆಯ ಬಳಿ ಇಬ್ಬರು ಸದಸ್ಯರು ಸಭೆ ಸೇರಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಿದ್ದರು. ಆದರೆ ಸಭೆಯಲ್ಲಿ ಲಖನ್ ಶರ್ಮಾ ಅವರ ಸಹೋದರ ದಿಲಾವರ್ ಅವರು ಸುರೇಂದ್ರ ಸಿಂಗ್ ಮತ್ತು ಅವರ ಮಗ ಸಚಿನ್ ಮೇಲೆ ಗುಂಡು ಹಾರಿಸಿದ್ದಾನೆ. ತಕ್ಷಣ ಕೊತ್ವಾಲಿ ಪೊಲೀಸ್ ಠಾಣೆಗೆ ಕರೆ ಮಾಡಿ, ಸುರೇಂದ್ರ ಸಿಂಗ್ ಮೊದಲು ತನ್ನ ಮೇಲೆ ಗುಂಡು ಹಾರಿಸಿದ್ದು, ನಾನು ಅವರ ಮೇಲೆ ಗುಂಡು ಹಾರಿಸಿದ್ದೇನೆ ಎಂದು ಹೇಳಿದ್ದಾನೆ.
