ಬೆಂಗಳೂರು: ರಾಜ್ಯದ ಹಲವೆಡೆ ಬೇಡ ಜಂಗಮ ಎಂದು ಕೆಲವರು ಸುಳ್ಳು ಜಾತಿ ಪ್ರಮಾಣಪತ್ರ ಪಡೆದುಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಸುಳ್ಳು ಪ್ರಮಾಣಪತ್ರ ಪಡೆದಿರುವ ಹಾಗೂ ಪ್ರಮಾಣ ಪತ್ರ ನೀಡಿರುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.
ಕರ್ನಾಟಕ ವಿಧಾನ ಮಂಡಲಗಳ ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಕ್ರಮಕ್ಕೆ ದಿಟ್ಟ ಹೆಜ್ಜೆ ಇಟ್ಟಿದೆ. ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿರುವವರ ಪೂರ್ಣ ಮಾಹಿತಿ ಸಂಗ್ರಹಕ್ಕೆ ಸರ್ಕಾರ ನಿರ್ದೇಶನ ನೀಡಿದೆ. ಬೇಡ ಜಂಗಮ ಪರಿಶಿಷ್ಟ ಪ್ರಮಾಣಪತ್ರ ನೀಡಿರುವ ಅಧಿಕಾರಿ/ ನೌಕರರನ್ನು ಕೂಡಲೇ ಕೆಲಸದಿಂದ ಅಮಾನತುಗೊಳಿಸಲು/ವಾರ್ಷಿಕ ವೇತನ ಬಡ್ತಿ ಕಡಿತಗೊಳಿಸಲು ಹಾಗೂ ಅಂತಹ ಅಧಿಕಾರಿಗಳ ಸೇವಾ ವಹಿಯಲ್ಲಿ ದಾಖಲಿಸಲು ಸಮಿತಿ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ 2010ರಿಂದೀಚೆಗೆ ಎಷ್ಟು ಬೇಡ ಜಂಗಮ ಜಾತಿ ಪ್ರಮಾಣಪತ್ರ ವಿತರಿಸಲಾಗಿದೆ? ನೀಡಿದವರು ಮತ್ತು ಪಡೆದುಕೊಂಡವರ ವಿವರ ಹಾಗೂ ಪ್ರಮಾಣಪತ್ರದ ನಕಲನ್ನು ತಕ್ಷಣ ಒದಗಿಸುವಂತೆ ಎಲ್ಲ ಪ್ರಾದೇಶಿಕ ಆಯುಕ್ತರಿಗೆ ಕಂದಾಯ ಇಲಾಖೆ ಸರ್ಕಾರದ ಕಾರ್ಯದರ್ಶಿ ಸೂಚಿಸಿದ್ದಾರೆ.
ಬಜೆಟ್ ಅಧಿವೇಶನದಲ್ಲಿ ಬೇಡ ಜಂಗಮ ಸುಳ್ಳು ಪ್ರಮಾಣಪತ್ರ ವಿಷಯ ದೊಡ್ಡ ಸದ್ದು ಮಾಡಿತ್ತು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರ ಮಗಳು ಕೂಡ ಬೇಡ ಜಂಗಮ ಪ್ರಮಾಣಪತ್ರ ಪಡೆದಿರುವುದನ್ನು ಪ್ರತಿಪಕ್ಷ ಕಾಂಗ್ರೆಸ್ ಎತ್ತಿ ಹಿಡಿದು ಕಲಾಪದಲ್ಲಿ ಗಲಾಟೆ ಮಾಡಿದ ಪ್ರಸಂಗವೂ ನಡೆದಿತ್ತು.

