ಹಾವೇರಿ: ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿ ಅಧಿಕಾರ ಪಡೆದಿದ್ದ ಗ್ರಾಪಂ ಸದಸ್ಯೆಗೆ ಹಾವೇರಿಯ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ತ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಮಹತ್ವ ಆದೇಶ ಹೊರಡಿಸಿದೆ.
ಶಿಗ್ಗಾಂವಿ ತಾಲೂಕು ವನಹಳ್ಳಿ ಗ್ರಾಮದ ಲಕ್ಷ್ಮೀ ಮಾರುತಿ ಕಣ್ಣೀರ ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಸರ್ಕಾರಕ್ಕೆ ಮತ್ತು ನೈಜ ಪರಿಶಿಷ್ಟ ಜಾತಿಯ ಅಭ್ಯರ್ಥಿಗೆ ಮೋಸ ಮಾಡಿದ್ದರು ಎನ್ನಲಾಗಿದೆ.
ಲಕ್ಷ್ಮೀ ಕಬ್ಬೇರ ಹಿಂದು ಗಂಗಾಮತ ಜಾತಿಗೆ ಸೇರಿದ್ದವರು ಎನ್ನಲಾಗಿದೆ ಆದರೆ ಅವರು ಸುಳ್ಳು ಜಾತಿ ಪ್ರಮಾಣ ಸಲ್ಲಿಸಿ 2015ರಲ್ಲಿ ಶಿಗ್ಗಾಂವಿ ತಹಸೀಲ್ದಾರ್ ಕಚೇರಿಯಿಂದ ಹಿಂದು ಗಂಟಿಚೋರ್ಸ್ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದಿದ್ದರು. ನಂತರ ಪರಿಶಿಷ್ಟ ಜಾತಿ ಮಹಿಳಾ ಮೀಸಲಾತಿಯಡಿ ಹನುಮರಹಳ್ಳಿ ಗ್ರಾಮ ಪಂಚಾಯಿತಿ ಸದ್ಯಸರಾಗಿ ಆಯ್ಕೆಯಾಗಿದ್ದರು. ಇದಲ್ಲದೇ ಎಸ್.ಸಿ. ಸ್ಥಾನಕ್ಕೆ ಮೀಸಲಾಗಿದ್ದ ಗ್ರಾಪಂ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು.
ಈ ಕುರಿತಂತೆ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಜಿ.ಎಲ್. ಲಕ್ಷ್ಮೀನಾರಾಯಣ ಗುರುವಾರ ಅಪರಾಧಿಗೆ ಏಳು ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 19 ಸಾವಿರ ರೂ. ದಂಡ ವಿಧಿಸಿದ್ದಾರೆ.