ಕಡಬ: ಕಾರಿನಲ್ಲಿ ಬಂದ ಅಪರಿಚಿತರು ಮಹಿಳೆಯೊಬ್ಬರ ಸರ ಕದ್ದು ಪರಾರಿಯಾಗುತ್ತಿರುವ ಸಂದರ್ಭದಲ್ಲಿ ಕಾರು ಅಪಘಾತಗೊಂಡು ಇಬ್ಬರು ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಇಂದು ನಡೆದಿದೆ.ಕಡಬ ತಾಲೂಕಿನ ಕಾಣಿಯೂರಿನಲ್ಲಿ ಈ ಘಟನೆ ನಡೆದಿದ್ದು, ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಸರವನ್ನು ಅಪರಿಚಿತರು ಕಿತ್ತುಕೊಂಡು ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದರು ಎನ್ನಲಾಗಿದೆ.
ತಕ್ಷಣ ಮಹಿಳೆ ಕಿರುಚಿಕೊಂಡಾಗ ಸ್ಥಳದಲ್ಲಿದ್ದ ಜನರು ಕಳ್ಳರನ್ನು ಬೆನ್ನಟ್ಟಿದ್ದು, ಗಾಬರಿಗೊಂಡ ಕಳ್ಳರು ಅತಿಯಾದ ವೇಗದಲ್ಲಿ ಕಾರು ಚಲಾಯಿಸಿದ್ದರಿಂದ ಕಾರು ಅಪಘಾತಕ್ಕೀಡಾಗಿದೆ. ಈ ಸಂದರ್ಭ ಇಬ್ಬರು ಕಾರಿನಲ್ಲಿ ಸಿಲುಕಿ ಗಂಭೀರ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಳ್ಳರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.ಇಬ್ಬರು ಕೂಡ ಕಾಸರಗೋಡು ಮೂಲದವರಾಗಿದ್ದಾರೆ ಎನ್ನಲಾಗಿದೆ.
