ಉಡುಪಿ: ಯೇಸು ಶಿಲುಬೆಗೇರಿ ಮೂರನೇ ದಿನ ಪುನರುತ್ಥಾನಗೊಂಡ ಈಸ್ಟರ್ ಹಬ್ಬವನ್ನು ಕ್ರೈಸ್ತರು ಜಿಲ್ಲೆಯಾದ್ಯಂತ ಇಂದು ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಿದರು.
ಬೈಬಲ್ ನಂಬಿಕೆಯಂತೆ ಯೇಸು ಕ್ರಿಸ್ತರು ಶಿಲುಬೆಗೇರಿದ ಮೂರನೇ ದಿನ ಅಂದರೆ ಈಸ್ಟರ್ ಸಂಡೆಯಂದು ಪುನರುತ್ಥಾನರಾದರೆಂಬ ವಿಶ್ವಾಸದೊಂದಿಗೆ ವಿಶ್ವದಾದ್ಯಂತ ಈ ಹಬ್ಬವನ್ನು ಆಚರಿಸಲಾಗುತ್ತದೆ. ಜಿಲ್ಲೆಯ ಎಲ್ಲ ಚರ್ಚ್ಗಳಲ್ಲಿ ಈಸ್ಟರ್ ಹಬ್ಬದ ಪ್ರಯುಕ್ತ ಶನಿವಾರ ರಾತ್ರಿ ವಿಶೇಷ ಈಸ್ಟರ್ ಜಾಗರಣೆ ಮತ್ತು ಬಲಿ ಪೂಜೆಗಳು ಜರುಗಿದವು.
ಕ್ರೈಸ್ತರು ವಿಭೂತಿ ಬುಧವಾರದಿಂದ ಆರಂಭಿಸಿ 45 ದಿನಗಳ ಉಪವಾಸ ವ್ರತ ಹಾಗೂ ಧ್ಯಾನದಲ್ಲಿ ಯೇಸುವಿನ ಕಷ್ಟಗಳನ್ನು ನೆನೆದು ಈಸ್ಟರ್ ಹಬ್ಬದಂದು ಯೇಸುವಿನ ಪುನರುತ್ಥಾನಗೊಳ್ಳುವುದರ ಮೂಲಕ ತಿಂಗಳ ಕಷ್ಟಗಳ ತಪಸ್ಸಿಗೆ ಕೊನೆ ಹೇಳುತ್ತಾರೆ. ಈಸ್ಟರ್ ಹಬ್ಬವೂ ಕೂಡ ಕ್ರಿಸ್ಮಸ್ ಹಬ್ಬದಂತೆ ಕ್ರೈಸ್ತರಿಗೆ ಪ್ರಮುಖ ಹಬ್ಬವಾಗಿದೆ.ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಪೂಜೆಗಳು ಸಂಪನ್ನಗೊಂಡವು.
