ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವದ ‘ಅನ್ನಭಾಗ್ಯ’ ಯೋಜನೆಯಡಿ 05 ಕೆಜಿ ಅಕ್ಕಿ ಜತೆಗೆ ಉಳಿದ 05 ಕೆಜಿ ಅಕ್ಕಿಗೆ ಪ್ರತಿ ಕೆಜಿಗೆ 34 ರೂ.ನಂತೆ ದರ ನಿಗದಿಪಡಿಸಿದಂತೆ ಪಡಿತರ ಚೀಟಿಯಲ್ಲಿರುವ ಪ್ರತಿ ಸದಸ್ಯನಿಗೆ ತಲಾ 170 ರೂ. ಹಣವನ್ನು ಡಿಬಿಟಿ ಮೂಲಕ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರ ಪಾವತಿಗೆ ರಾಜ್ಯ ಸರ್ಕಾರವು ಈಗಾಗಲೇ ಚಾಲನೆ ನೀಡಿದ್ದು, ಇದಕ್ಕಾಗಿ ರಾಜ್ಯದ ಎಲ್ಲಾ ಕಡೆಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆ ಜಾರಿ ಮಾಡಿ ರಾಜ್ಯದಲ್ಲಿರುವ ಅಂತ್ಯೋದಯ ಅನ್ನಯೋಜನೆ (ಎಎವೈ) ಮತ್ತು ಆದ್ಯತಾ ಪಡಿತರ ಚೀಟಿಗಳ (ಪಿಎಚ್‌ಎಚ್) ಪ್ರತಿ ಫಲಾನುಭವಿಗೆ ರಾಷ್ಟೀಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುವ ಐದು ಕೆಜಿ ಆಹಾರಧಾನ್ಯಯೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ ಐದು ಕೆಜಿ ಆಹಾರ ಧಾನ್ಯ ಸೇರಿಸಿ ಪ್ರತಿ ಮಾಹೆ ಪ್ರತಿ ಫಲಾನುಭವಿಗೆ ಹತ್ತು ಕೆಜಿ ಆಹಾರಧಾನ್ಯವನ್ನು ಉಚಿತವಾಗಿ ವಿತರಿಸಲು ಸರ್ಕಾರವು ನಿರ್ಧರಿಸಿದಂತೆ ಕ್ರಮ ವಹಿಸಲಾಗುತ್ತಿದೆ.
ಸಾರ್ವಜನಿಕರಿಗೆ ಸೂಚನೆ
ಆಧಾರ್ ಲಿಂಕ್ ಆಗದೇ ಇರುವ ಸಕ್ರೀಯ ಬ್ಯಾಂಕ್‌ಖಾತೆ ಇಲ್ಲದೇ ಇರುವ ಮತ್ತು ಬ್ಯಾಂಕ್ ಇ-ಕೆವೈಸಿ ಆಗದೇ ಇರುವ ಅಂತ್ಯೋದಯ ಅನ್ನಭಾಗ್ಯ ಯೋಜನೆ (ಎಎವೈ) ಮತ್ತು ಆದ್ಯತಾ ಪಡಿತರ ಚೀಟಿ (ಪಿಎಚ್‌ಎಚ್) ಫಲಾನುಭವಿಗಳು ಜುಲೈ20ರೊಳಗಾಗಿ ಸರಿಪಡಿಸಿಕೊಳ್ಳಲು ಆಹಾರ ಇಲಾಖೆಯ ಉಪ ನಿರ್ದೇಶಕರು ಸೂಚಿಸಿದ್ದಾರೆ. ಎಎವೈ ಅಂತ್ಯೋದಯ ಅನ್ನಭಾಗ್ಯ ಯೋಜನೆಯಡಿ ಕಡುಬಡವರೆಂದು ಹೇಳಿ ಸರ್ಕಾರ ಈಗಾಗಲೇ 21 ಕೆಜಿ ಅಕ್ಕಿಯನ್ನು ಮತ್ತು 14 ಕೆಜಿ ಜೋಳವನ್ನು ಉಚಿತವಾಗಿ ನೀಡುತ್ತಿದೆ. ಮೂರಕ್ಕಿಂತ ಹೆಚ್ಚು ಮಂದಿ ಇದ್ದರೆ ಮಾತ್ರ ಒಬ್ಬರಿಗೆ 170 ರೂ. ಹಣ ಸಿಗುತ್ತದೆ. 3 ಕ್ಕಿಂತ ಎಷ್ಟೇ ಮಂದಿ ಇದ್ದರೂ ಪ್ರತಿಯೊಬ್ಬರಿಗೂ 170 ರೂ. ನಗದು ಸೌಲಭ್ಯ ಸಿಗುತ್ತದೆ ಎಂದು ಜಿಲ್ಲೆಯಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇ-ಕೆವೈಸಿಯನ್ನು ಮಾಡಿಸದೇ ಇರುವ ಪಡಿತರ ಚೀಟಿದಾರರಿಗೆ ಆಗಸ್ಟ್ ತಿಂಗಳಿನಿಂದ ಆಹಾರ ಧಾನ್ಯ ಹಾಗೂ ನಗದು ವರ್ಗಾವಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎನ್ನಲಾಗಿದೆ. ಪಡಿತರ ಚೀಟಿಯ ಕುಟುಂಬದ ಮುಖ್ಯಸ್ಥರಿಗೆ ಹಣ ಜಮೆಯಾಗದೆ ಇರುವುದಕ್ಕೆ ಮುಖ್ಯಸ್ಥರು ನಿಷ್ಕ್ರಿಯ ಬ್ಯಾಂಕ್ ಖಾತೆ ಹೊಂದಿರುವುದು, ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ (ಇ-ಕೆವೈಸಿ) ಮಾಡದಿರುವುದು. ಅಥವಾ ಕುಟುಂಬದ ಮುಖ್ಯಸ್ಥರು ಬ್ಯಾಂಕ್ ಖಾತೆ ಹೊಂದದೆ ಇರುವುದು, ಅಮಾನ್ಯವಾದ ಆಧಾ ಸಂಖ್ಯೆ ನೀಡಿದ್ದು ಕಾರಣವಾಗಿರುತ್ತದೆ. ಅರ್ಹ ಚೀಟಿ ದಾರರು DBT ಮೂಲಕ ಹಣ ವರ್ಗಾವಣೆಯಾದ ಬಗ್ಗೆ ಹಾಗೂ ಇತರೆ ವಿವರಗಳಿಗೆhttps://ahara.kar.nic.in/status2/status_of_dbt.aspxಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದು.