Thursday, April 18, 2024
spot_img
More

    Latest Posts

    ಕುದಿಯುವವರು ಕುದಿಯಲಿ ಉರಿಯುವವರು ಉರಿಯಲಿ. ನಿನ್ನ ಪಾಡಿಗೆ ನೀನಿರು..! ಕುದಿಯುವವರು ಆವಿಯಾಗುತ್ತಾರೆ. ಉರಿಯುವವರು ಬೂದಿಯಾಗುತ್ತಾರೆ

    ಪ್ರಸಕ್ತ ಪ್ರಪಂಚದ ನಾಗರಿಕ ಜನಾಂಗ ಪರರ ಬಗೆಗಿನ ಅಸೂಯೆಯೇ ತಮ್ಮ ಜೀವನಕ್ಕೊಪ್ಪುವ ಆಭರಣ ಎಂದು ತಿಳಿದುಕೊಂಡ ಹಾಗಿದೆ. ಪ್ರತಿನಿತ್ಯ ಪ್ರತಿಕ್ಷಣ ಪರರ ಅಭ್ಯುದಯವನ್ನು ಸಹಿಸಿಕೊಳ್ಳಲಾಗದ ವಿಚಿತ್ರ ಮನಸ್ಥಿತಿಯವರು ತುಂಬಿಕೊಂಡ ಜಗತ್ತು ಇದಾಗಿದೆಯೇ ಎನ್ನುವ ದಿಟ ಸಂಶಯ ನನ್ನ ಕಾಡುತ್ತಿದೆ. ನಾವೊಂದು ಗುರಿಯನ್ನು ಇಟ್ಟುಕೊಂಡು, ಆ ದಿಸೆಯಲ್ಲಿ ಹೆಜ್ಜೆಯನ್ನಿಟ್ಟು ವಿವಿಧ ಸ್ತರಗಳಲ್ಲಿ ಸೋಲನ್ನುಂಡು ಛಲ ಬಿಡದ ತ್ರಿವಿಕ್ರಮನಂತೆ ನಮ್ಮ ಮಹತ್ತರ ಉದ್ದೇಶದ ಗುರಿಯನ್ನು ಮುಟ್ಟಿದಾಗ, ಸಂತಸದ ಮೇರು ಶಿಖರದಲ್ಲಿ ಹತ್ತಿ ಇಳಿದು ಕುಪ್ಪಳಿಸುತ್ತೇವೆ ನಾವು. ಇದು ಸಹಜ ಕೂಡಾ. ಸಂತಸದ ಮಧುರ-ಅವಿಸ್ಮರಣೀಯ ಕ್ಷಣಗಳನ್ನು ನಮ್ಮವರೆಂದುಕೊಂಡವರ ಜೊತೆ ಹಂಚಿಕೊಂಡಾಗ ನಮಗೆ ನಮ್ಮವರೆನಿಸಿಕೊಂಡವರಿಂದ ದೊರಕುವ ಪ್ರತಿಕ್ರಿಯೆ ಬಲು ನೀರಸ ಎನ್ನುವುದೇ ಬೇಸರದ ವಿಚಾರ. ನಮ್ಮ ಸಾಧನೆ ಪ್ರಶಂಸಿಸಲ್ಪಡಬೇಕು, ಆ ಮೂಲಕ ಗರಿಗೆದರಿದ ನಮ್ಮ ಮನ ಹುಚ್ಚೆದ್ದು ಕುಣಿಯಬೇಕು ಎಂಬ ನಮ್ಮ ಮನಸ್ಥಿತಿಗೆ ಪರರ ಶೂನ್ಯ ಪ್ರತಿಕ್ರಿಯೆ ತಣ್ಣೀರೆರಚುವುದಂತೂ ಖಂಡಿತ. ದುರ್ಬಲ ಮನಸ್ಥಿತಿಯ ಸಾಧಕರಿಗೆ ಇಂಥಹ ನಿರುತ್ಸಾಹದ ಮಾತುಗಳು, ಅಸೈರಣೆಯ ನುಡಿಗಳು ಖಿನ್ನತೆಯ ಕೂಪಕ್ಕೆ ಅವರನ್ನು ತಳ್ಳಬಹುದೇನೋ. ಈ ಸಂಧರ್ಭದಲ್ಲಿ ನನ್ನ ಒಡಲಿನಾಳದ ಮಾತುಗಳಿಷ್ಟೆ. ನಾವು ನಮಗಾಗಿ ಬದುಕಬೇಕಿದೆ. ಸುತ್ತಲಿನ ಪ್ರಪಂಚ ನಮ್ಮ ಸಾಧನೆಯ ಹಾದಿಯಲ್ಲಿ ಪೂರಕ ವಾತಾವರಣ ನಿರ್ಮಾಣ ಮಾಡಿದರೆ ಒಳಿತು. ಆದರೆ ಅದು ದೊರೆಯದೇ ಇದ್ದಾಗ ಅದನ್ನು ಸವಾಲಾಗಿ ಸ್ವೀಕರಿಸಬೇಕೇ ವಿನಹ ಅದು ಋಣಾತ್ಮಕ ಅಂಶವಾಗಿ ಇನ್ನೊಬ್ಬರ ಮನ ಚುಚ್ಚುವ ಮಾತುಗಳು ನಮ್ಮ ಉಜ್ವಲ ಭವಿಷ್ಯದ ಹಾದಿಯಲ್ಲಿ ಮುಳ್ಳಾಗದಿರಲಿ.
    ಪರರ ಅಸೂಯೆಯ, ಧ್ವೇಷದ ಮಾತುಗಳು, ಮತ್ಸರದ ಜ್ವಾಲಾಗ್ನಿ ನಮ್ಮನ್ನು ಕೊರಗುವಂತೆ ಮಾಡಿ, ನಮ್ಮ ಜೀವನವನ್ನು ಸುಟ್ಟು ಭಸ್ಮ ಮಾಡದಿರಲಿ. ಪರರ ದ್ವೇಷದ ಬೆಂಕಿಯಲ್ಲಿ ನಾವು ಬಿದ್ದರೂ ಸರಿ…. ಬಿದ್ದರೆ ಅಶುದ್ಧ ಚಿನ್ನವಾಗಿ ಬೀಳೋಣ. ಬೆಂಕಿಯ ಆ ಶಾಖದಲ್ಲಿ ಅಶುದ್ಧ ಚಿನ್ನ ಅಪರಂಜಿಯಾಗಬಹುದೇ ವಿನಹ ತನ್ನ ಅಂತ್ಯವನ್ನಂತೂ ಕಾಣದು. ಆದರೆ ಒಂದಷ್ಟು ಹೊತ್ತು ಹೊತ್ತಿ ಉರಿಯುವ ಬೆಂಕಿ ಮತ್ತರೆ ಕ್ಷಣದಲ್ಲಿ ಉರಿದು ಬೂದಿಯಾಗುವುದು ನಿಸ್ಸಂಶಯ. ಪರಿಪೂರ್ಣತೆಯ ಹಂತಕ್ಕೆ ತಲುಪುವುದು ಚಿನ್ನವೇ ವಿನಹ ಬೆಂಕಿಯಲ್ಲ…. ಅಲ್ಲವೇ ಸನ್ಮಿತ್ರರೇ.?
    ಹಾಗಿರುವಾಗ ಎಷ್ಟೊಂದು ಅರ್ಥಪೂರ್ಣ ಮಾತಿದು. ಕುದಿಯುವವರು ಕುದಿಯಲಿ. ಉರಿಯುವವರು ಉರಿಯಲಿ. ನಿನ್ನ ಪಾಡಿಗೆ ನೀನಿರು..! ಕುದಿಯುವವರು ಆವಿಯಾಗುತ್ತಾರೆ… ಉರಿಯುವವರು ಬೂದಿಯಾಗುತ್ತಾರೆ. ನೀನು ನೀನಾಗಿರು.. ಭಯಪಡದಿರು.

    ಬರಹ:ಡಾ| ದುರ್ಗಾಪ್ರಸಾದ್. ಎಂ. ಆರ್.
    ಮಂಗಳೂರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss