ಆಹಾರವಿಲ್ಲದೆ ನಾಲ್ಕೈದು ದಿನ ಕಳೆಯಬಹುದು. ಆದ್ರೆ ನೀರಿಲ್ಲದೆ ಒಂದು ದಿನ ಕಳೆಯೋದು ಕಷ್ಟ. ನೀರು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಇದ್ದದಿದ್ದರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ.
ದಿನಕ್ಕೆ ಐದಾರು ಲೀಟರ್ ನೀರು ಕುಡಿಯುವವರಿದ್ದಾರೆ. ಕಡಿಮೆ ನೀರು ಕುಡಿಯೋದು ದೇಹಕ್ಕೆ ಹೇಗೆ ಹಾನಿಕಾರಕವೋ ಅದೇ ರೀತಿ ಹೆಚ್ಚು ನೀರು ಕುಡಿಯೋದು ಕೂಡ ಅಪಾಯಕಾರಿ. ಈ ಬಗ್ಗೆ ಅನೇಕ ಸಂಶೋಧನೆಗಳು ನಡೆದಿವೆ. ನೀರು ಸೇವನೆಯಿಂದಾಗುವ ಲಾಭಗಳೇನು, ಹೆಚ್ಚು ನೀರು ಕುಡಿದ್ರೆ ಆಗುವ ಹಾನಿ ಏನು? ಎಂಬುದನ್ನು ತಿಳಿಯುವುದು ಅಗತ್ಯವಾಗಿದೆ.
ನೀರು ಕುಡಿಯುವುದ್ರಿಂದ ಏನೆಲ್ಲ ಲಾಭ
ನೀರು ದೇಹದಲ್ಲಿ ಅನೇಕ ಕಾರ್ಯಗಳನ್ನು ನಿರ್ವಹಿಸುತ್ತದೆ. ಜೀವಕೋಶಗಳಿಗೆ ಪೋಷಣೆ ಮತ್ತು ಆಮ್ಲಜನಕವನ್ನು ತಲುಪಿಸಲು ನೀರು ಅಗತ್ಯವಾಗಿದೆ. ನೀರು ಮೂತ್ರಕೋಶ ಮತ್ತು ದೇಹದಲ್ಲಿರುವ ಕೊಳಕು, ವಿಷ ಪದಾರ್ಥ ಮತ್ತು ಕೆಟ್ಟ ಬ್ಯಾಕ್ಟೀರಿಯಾವನ್ನು ಹೊರಗೆ ಹಾಕಲು ನೆರವಾಗುತ್ತದೆ. ಸರಿಯಾದ ರೀತಿಯಲ್ಲಿ ಆಹಾರ ಜೀರ್ಣವಾಗ್ಬೇಕೆಂದ್ರೆ ನೀರು ಅಗತ್ಯ. ಮಲಬದ್ಧತೆ ಸಮಸ್ಯೆಯನ್ನು ತಡೆಯುವುದಲ್ಲದೆ. ಬಿಪಿ ಮಟ್ಟವನ್ನು ನಿಯಂತ್ರಿಸುವ ಕೆಲಸವನ್ನು ನೀರು ಮಾಡುತ್ತದೆ. ಕೀಲುಗಳ ಆರೋಗ್ಯಕ ರಕ್ಷಿಸುವ ಜೊತೆಗೆ ದೇಹದ ಭಾಗಗಳು ಮತ್ತು ಅಂಗಾಂಶಗಳನ್ನು ರಕ್ಷಿಸುತ್ತದೆ. ದೇಹದ ಉಷ್ಣತೆಯನ್ನು ನಿರ್ವಹಿಸುವ ಕೆಲಸವನ್ನು ನೀರು ಮಾಡುತ್ತದೆ. ದೇಹದಲ್ಲಿ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳುವ ಜೊತೆಗೆ ನಮ್ಮ ದೇಹ ಆರೋಗ್ಯವಾಗಿರುವಂತೆ ಮಾಡಲು ನೀರು ಬೇಕೇಬೇಕು.
ಕಡಿಮೆ ನೀರು ಸೇವನೆ ಮಾಡುವುದರಿಂದಾಗುವ ಸಮಸ್ಯೆಗಳು
ಪ್ರತಿ ದಿನ 2 -3 ಲೀಟರ್ ನೀರು ಕುಡಿಯಬೇಕು. ಅದಕ್ಕಿಂತ ಕಡಿಮೆ ನೀರು ಕುಡಿಯುವುದ್ರಿಂದ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾಗುತ್ತದೆ. ತಲೆನೋವು, ಆಯಾಸ, ತಲೆತಿರುಗುವಿಕೆ, ಸುಸ್ತು, ಬಾಯಿ ಒಣಗುವುದು, ಒಣ ಕೆಮ್ಮು, ಕಡಿಮೆ ರಕ್ತದೊತ್ತಡ, ಕಾಲುಗಳು ಊದಿಕೊಳ್ಳುವುದು, ಮಲಬದ್ಧತೆ, ಮೂತ್ರದ ಬಣ್ಣ ಬದಲಾಗುವುದು ಸೇರಿದಂತೆ ಅನೇಕ ಸಮಸ್ಯೆ ಕಾಡುತ್ತದೆ.
ಅತಿ ಹೆಚ್ಚು ನೀರು ಸೇವನೆಯಿಂದಾಗುವ ಸಮಸ್ಯೆ
ನೀರಿನ ಪ್ರಮಾಣ ದೇಹದಲ್ಲಿ ಹೆಚ್ಚಾದ್ರೂ ಸಮಸ್ಯೆ ನಿಶ್ಚಿತ. ನೀರನ್ನು ಹೆಚ್ಚಾಗಿ ಸೇವನೆ ಮಾಡಿದ್ರೆ ನೀವು ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗ್ಬೇಕಾಗುತ್ತದೆ. ಮೂತ್ರವಿಸರ್ಜನೆ ಹೆಚ್ಚಾದ್ರೆ ಎಲೆಕ್ಟ್ರೋಲೈಟ್‌ಗಳ ಕೊರತೆ, ವಾಕರಿಕೆ, ಕೈ ಮತ್ತು ಕಾಲುಗಳ ಬಣ್ಣ ಬದಲಾವಣೆ, ಸ್ನಾಯು ಸೆಳೆತ, ತಲೆನೋವು ಮತ್ತು ಆಯಾಸ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ.
ನಿಮ್ಮ ದೇಹದಲ್ಲಿ ನೀರು ಹೆಚ್ಚಾಗಿದೆ ಎಂದು ತಿಳಿಯಲು ಹೀಗೆ ಪರೀಕ್ಷೆ ಮಾಡಿ
ನಿಮ್ಮ ಮೂತ್ರದ ಮೂಲಕ ನೀವು ನಿಮ್ಮ ದೇಹದ ನೀರಿನ ಪ್ರಮಾಣ ಪರೀಕ್ಷೆ ಮಾಡಬಹುದು. ಮೂತ್ರ ಗಾಢ ಹಳದಿ ಬಣ್ಣದಲ್ಲಿದ್ದರೆ ನಿಮ್ಮ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ ಎಂದರ್ಥ. ಅದೇ ಬಿಳಿಯಾಗಿದ್ದರೆ ನೀರಿನ ಪ್ರಮಾಣ ಹೆಚ್ಚಿದೆ ಎಂಬ ಸೂಚನೆಯಾಗಿದೆ.
