ಆಗ್ರಾ: ಎರಡು ವಾರಗಳ ಹಿಂದೆ ಬೀದಿ ನಾಯಿ ಕಚ್ಚಿ 8 ವರ್ಷದ ಬಾಲಕಿಯೊಬ್ಬಳು ಉತ್ತರ ಪ್ರದೇಶದ ಆಗ್ರಾದಲ್ಲಿ ಬುಧವಾರ ಸಾವನ್ನಪ್ಪಿರುವ ಘಟನೆ ನಡೆದಿದೆ.
ಪೂನಂ ಎಂಬ ಬಾಲಕಿ 15 ದಿನಗಳ ಹಿಂದೆ ಪಿನಾಹತ್‌ನ ಹಳ್ಳಿಯೊಂದರಲ್ಲಿ ಆಟವಾಡುತ್ತಿದ್ದಾಗ ಬೀದಿ ನಾಯಿ ದಾಳಿ ಮಾಡಿತ್ತು. ಇದೀಗ ಆಕೆ ಕೊನೆಯುಸಿರೆಳೆದಿದ್ದಾಳೆ.
ವರದಿಯ ಪ್ರಕಾರ, ಬಾಲಕಿ ತನ್ನ ತಾಯಿಯನ್ನು ಹೊರತುಪಡಿಸಿ ತನ್ನ ಕುಟುಂಬದಲ್ಲಿ ನಡೆದ ಘಟನೆಯ ಬಗ್ಗೆ ಯಾರಿಗೂ ತಿಳಿಸಲಿಲ್ಲ ಮತ್ತು ಅಗತ್ಯವಾದ ಆಂಟಿ ರೇಬೀಸ್ ಲಸಿಕೆ (ARV) ಅನ್ನು ನೀಡುವ ಬದಲು ಕೆಲವು ಮನೆಮದ್ದುಗಳನ್ನು ಆಕೆಗೆ ನೀಡಲಾಗಿತ್ತು. 15 ದಿನಗಳ ನಂತರ ಬಾಲಕಿಗೆ ರೋಗಲಕ್ಷಣಗಳು ಕಾಣಿಸಿಕೊಂಡಾಗ ಮಾತ್ರ ಕುಟುಂಬದವರು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಆಕೆಯನ್ನು ಆಗ್ರಾದ ಉನ್ನತ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಮಾರ್ಗಮಧ್ಯೆ ಆಕೆ ಸಾವನ್ನಪ್ಪಿದ್ದಾಳೆ.
“ರೇಬೀಸ್‌ಗೆ 100 ಪ್ರತಿಶತ ಮರಣ ಪ್ರಮಾಣವಿದೆ. ಆದ್ದರಿಂದ, ನಿಮಗೆ ನಾಯಿ ಕಚ್ಚಿದರೆ ನೀವು ಮೌನವಾಗಿರಬೇಡಿ; ನೀವು ಸರಿಯಾದ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ನಮ್ಮಲ್ಲಿ ಈಗ ಲಸಿಕೆಗಳು ಲಭ್ಯವಿದೆ” ಎಂದು ಸಿಎಮ್‌ಒ ಶ್ರೀವಾಸ್ತವ ಹೇಳಿದರು.