ಮಂಗಳೂರು: ಬಾಲಕಿಗೆ ಹುಟ್ಟಿರುವ ಮಗುವಿಗೂ ಆರೋಪಿಗೂ ಸಂಬಂಧ ಇಲ್ಲವೆಂದು ಡಿಎನ್‌ಎ ವರದಿ ಬಂದಿರುವ ಹಿನ್ನೆಲೆಯಲ್ಲಿ ಆರೋಪಿ ತಪ್ಪಿತಸ್ಥನಲ್ಲ ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಅಪ್ರಾಪ್ತ ವಯಸ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯಾಗಲು ಕಾರಣನಾದ ಆರೋಪ ಎದುರಿಸುತ್ತಿದ್ದ ಪೋಕ್ಸೋ ಪ್ರಕರಣದ ಆರೋಪಿ ಅಕ್ಷತ್‌ನನ್ನು 2ನೇ ಹೆಚ್ಚುವರಿ ಎಫ್‌ಎಸ್‌ಟಿಸಿ ಜಿಲ್ಲಾ ಸತ್ರ ನ್ಯಾಯಾಲಯ ದೋಷಮುಕ್ತಗೊಳಿಸಿದೆ.
2019ರಲ್ಲಿ ಧರ್ಮಸ್ಥಳದ ಅಶೋಕನಗರದಲ್ಲಿ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಾಗ ಆರೋಪಿ ಅಕ್ಷತ್ ಹೇರ್ ಸೆಟ್ಟಿಂಗ್ ಮೆಷಿನ್ ಕೇಳುವ ನೆಪದಲ್ಲಿ ಬಂದು ಬಲವಂತದ ಲೈಂಗಿಕ ಸಂಪರ್ಕ ನಡೆಸಿದ್ದ. ಇದರ ಬಳಿಕವೂ ಹಲವು ಬಾರಿ ಲೈಂಗಿಕ ಸಂಪರ್ಕ ನಡೆಸಿದ್ದರಿಂದ ಬಾಲಕಿ 10-12 ವಾರಗಳ ಗರ್ಭಿಣಿಯಾಗಿದ್ದಾಗಿ ದೂರಿನಲ್ಲಿ ಆರೋಪಿಸಲಾಗಿತ್ತು. ಈ ಬಗ್ಗೆ ಪೋಕ್ಸೋ ಕಾಯ್ದೆ, ಐಪಿಸಿ 376ರ ಅನ್ವಯ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ರಾಧಾಕೃಷ್ಣ ಅವರು ಪ್ರಾಸಿಕ್ಯೂಷನ್ ಹಾಗೂ ಆರೋಪಿ ಪರ ವಾದ ಆಲಿಸಿ, ಬಾಲಕಿಗೆ ಹುಟ್ಟಿರುವ ಮಗುವಿಗೂ ಆರೋಪಿಗೂ ಸಂಬಂಧ ಇಲ್ಲವೆಂದು ಡಿಎನ್‌ಎ ವರದಿ ಬಂದಿರುವ ಹಿನ್ನೆಲೆಯಲ್ಲಿ ಆರೋಪಿ ತಪ್ಪಿತಸ್ಥನಲ್ಲ ಎಂದು ತೀರ್ಪು ನೀಡಿದ್ದಾರೆ. ಆರೋಪಿ ಪರ ಎಸ್.ಪಿ. ಚೆಂಗಪ್ಪ, ವಿಜಯ್ ಮಹಂತೇಶ್, ರಹಿಯಾನ ಅವರು ವಾದಿಸಿದ್ದರು.

