ಕೊಲ್ಯ (ಕೋಟೆಕಾರು): ಸಕ್ಕರೆ ಕಾಯಿಲೆಗೆ ಮೆಡಿಕಲ್ ನವರು ನಕಲಿ ಮಾತ್ರೆ ಕೊಟ್ಟಿದ್ದಾರೆ ಎಂದು ಆರೋಪ ಮಾಡಿದ್ದ ಉಳ್ಳಾಲ ತಾಲೂಕಿನ ಕೊಲ್ಯ (ಕೋಟೆಕಾರು) ನಿವಾಸಿ ರಾಮ್ ಗೋಪಾಲ್ ಇದೀಗ ತನ್ನಿಂದ ತಪ್ಪಾಗಿದೆ ಎಂದು ಕ್ಷಮೆಯಾಚನೆ ಮಾಡಿದ್ದಾರೆ.
ನಾನು ಟಿವಿ ಮಾಧ್ಯಮಗಳಲ್ಲಿ ಬಂದ ವರದಿ ನೋಡಿ ಗೊಂದಲಕ್ಕೀಡಾಗಿ ನಕಲಿ ಮಾತ್ರೆ ಇರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದು ನಿಜ. ಆದರೆ ಕಂಪನಿ ಅಧಿಕಾರಿಗಳು ನಮ್ಮ ಮನೆಗೆ ಬಂದು ಸಕ್ಕರೆ ಕಾಯಿಲೆ ಮಾತ್ರೆ ನಕಲಿ ಅಲ್ಲ ಅಸಲಿ ಎಂದು ಮನದಟ್ಟು ಮಾಡಿಸಿದ್ದಾರೆ. ಈ ನಿಟ್ಟಿನಲ್ಲಿ ಯಾರಿಗಾದರೂ ನನ್ನ ಈ ಹಿಂದಿನ ಹೇಳಿಕೆಯಿಂದ ಗೊಂದಲ, ಸಂಶಯ ಉಂಟಾಗಿದ್ದಲ್ಲಿ ದಯವಿಟ್ಟು ಕ್ಷಮಿಸಿ ಎಂದು ಸಂದೇಶ ಕಳುಹಿಸಿದ್ದಾರೆ.
ಘಟನೆ ಹಿನ್ನಲೆ ಏನು: ಕೋಟೆಕಾರು ನಿವಾಸಿ ರಾಮಗೋಪಾಲ್ ಆಚಾರ್ಯ ಅವರ ಪತ್ನಿ ಮೀನಾ ಕುಮಾರಿ ಎಂಬವರಿಗೆ ನಿತ್ಯ ಪಡೆದುಕೊಳ್ಳುವ ಮೆಡಿಕಲ್ ಶಾಪ್ ನಿಂದ ಮಧುಮೇಹ ಕಾಯಿಲೆಗೆ ಮಾತ್ರೆಗಳನ್ನು ಖರೀದಿಸಿದ್ದಾರೆ. ಸುದ್ಧಿ ಮಾಧ್ಯಮವೊಂದರಲ್ಲಿ ʻಶುಗರ್ ಮಾತ್ರೆ ಪ್ಲಾಸ್ಟಿಕ್ ಎಂಬ ಸುದ್ಧಿಯನ್ನು ಗಮನಿಸಿದ್ದ ರಾಮಗೋಪಾಲ್ ಅವರು ತಾನು ತಂದಿದ್ದ ಮಾತ್ರೆಗಳನ್ನು ಅಸಲಿಯೋ ನಕಲಿಯೋ ಅನ್ನುವುದನ್ನು ಪರಿಶೀಲಿಸಲು ಮುಂದಾಗಿದ್ದರು. ಅದರಂತೆ ಐಸ್ರಿಲ್ ಎಂ-22 ಎಂಜಿ ಮತ್ತು 500 ಎಂ.ಜಿ ಮಾತ್ರೆಗಳನ್ನು ಸಾರಿಡಾನ್, ಕ್ಯಾಲ್ಷಿಯಂ ಮಾತ್ರೆಗಳ ಜೊತೆಗೆ ನೀರಿನಲ್ಲಿ ಹಾಕಿದ್ದಾರೆ. ಬೆಳಿಗ್ಗೆ ಗಮನಿಸಿದಾಗ ಕ್ಯಾಲ್ಷಿಯಂ ಮತ್ತು ಸ್ಯಾರಿಡಾನ್ ಮಾತ್ರೆ ಸಂಪೂರ್ಣ ಕರಗಿ ಹೋಗಿದ್ದರೆ, ಮಧುಮೇಹ ಕಾಯಿಲೆಗೆ ತೆಗೆದುಕೊಳ್ಳುವ ಐಸ್ರಿಲ್ ಮಾತ್ರೆ ಮಾತ್ರ ಇದ್ದ ಮಾತ್ರೆಗಿಂತ ಐದು ಬಾರಿ ಉಬ್ಬಿ ರಬ್ಬರ್ ತರಹ ಕಂಡು ಬಂದಿದೆ. ಇದರಿಂದ ಗಾಬರಿಗೊಂಡ ರಾಮಗೋಪಾಲ್ ಅವರು ಮೆಡಿಕಲ್ ಅಂಗಡಿ ಮಾಲೀಕರಿಗೆ ಕರೆ ಮಾಡಿದ್ದಾರೆ. ಅವರು ತಾವು ಮಾತ್ರೆಗಳನ್ನು ಸಂಬಂಧಪಟ್ಟ ಕಂಪೆನಿ ಅಧಿಕೃತರಿಂದಲೇ ತರಿಸಿಕೊಳ್ಳುತ್ತಿದ್ದೇವೆ, ಸಂಶಯಗಳಿದ್ದಲ್ಲಿ ಮಾತ್ರೆ ಮೇಲಿರುವ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ. ಇದೊಂದು ನಕಲಿ ಮಾತ್ರೆ ಎಂದು ಉಳ್ಳಾಲ ತಾಲೂಕಿನ ಕೋಟೆಕಾರು ನಿವಾಸಿ ಮನೆಮಂದಿ ಆರೋಪಿಸಿದ್ದರು. ಇದೀಗ ಕಂಪನಿ ಅಧಿಕಾರಿಗಳು ಅವರ ಸಂಶಯವನ್ನು ನಿವಾರಿಸಿದ್ದು, ಜನರು ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ರಾಮ್ ಗೋಪಾಲ್ ಸ್ಪಷ್ಟನೆ ನೀಡಿ ಕ್ಷಮೆ ಕೋರಿದ್ದಾರೆ.