ಮಂಗಳೂರು: ಕಳೆದ ಕೆಲ ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನ ಬಿಟ್ಟು ದಿನ ಮಳೆ ಸುರಿಯಲಾರಂಭಿಸಿದೆ. ಪರಿಣಾಮ ಡೆಂಗ್ಯು, ಮಲೇರಿಯಾ ಸಾಂಕ್ರಾಮಿಕ ರೋಗ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಡೆಂಗ್ಯು ಪ್ರಕರಣವು ಪತ್ತೆಯಾಗುತ್ತಿರುವುದರಿಂದ ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ.
ಕೊರೊನಾ ಸೋಂಕು ಕಾಣುವುದಕ್ಕಿಂತ ಮೊದಲು ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಡೆಂಗ್ಯು ಪ್ರಕರಣದಿಂದ ತತ್ತರಿಸಿ ಹೋಗಿದ್ದರು. 2020ರಲ್ಲಿ ಹಾಗೂ 2021ರಲ್ಲಿ ಇಳಿಮುಖವಾಗಿದ್ದ ಡೆಂಗ್ಯು ಪ್ರಕರಣಗಳು ಈ ಬಾರಿ ಮತ್ತೆ ಏರಿಕೆಯಾಗಿರೋದು ಜನರಲ್ಲಿ ಭೀತಿಯನ್ನು ಉಂಟುಮಾಡಿದೆ. ಇದೀಗ ಮತ್ತೆ ಜಿಲ್ಲೆಯಲ್ಲಿ ದಿನ ಬಿಟ್ಟು ದಿನ ಮಳೆಯಾಗುತ್ತಿದ್ದು, ಡೆಂಗ್ಯು ಹಾಗೂ ಮಲೇರಿಯಾ ಪ್ರಕರಣಗಳಲ್ಲೂ ಏರಿಕೆ ಕಂಡು ಬರುತ್ತಿದೆ. ಮಾನ್ಸೂನ್ ಪ್ರವೇಶಕ್ಕಿಂತ ಮೊದಲೇ ಜಿಲ್ಲೆಯಲ್ಲಿ ಈಗಾಗಲೇ 55 ಡೆಂಗ್ಯು ಹಾಗೂ 51 ಮಲೇರಿಯಾ ಪ್ರಕರಣಗಳು ದಾಖಲಾಗಿದೆ. ಆದ್ದರಿಂದ ಜನರು ತಕ್ಷಣ ಜಾಗೃತರಾಗದಿದ್ದಲ್ಲಿ ಪ್ರಕರಣಗಳಲ್ಲಿ ಮತ್ತಷ್ಚು ಏರಿಕೆ ಕಂಡು ಬರುವ ಲಕ್ಷಣ ಗೋಚರಿಸುತ್ತಿದೆ.
ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯ ಪರಿಣಾಮ ಅಲ್ಲಲ್ಲಿ ನೀರು ನಿಲ್ಲುತ್ತಿದ್ದು, ಅದರಲ್ಲಿ ಉತ್ಪತ್ತಿಯಾಗುವ ಲಾರ್ವದಿಂದ ಡೆಂಗ್ಯು, ಮಲೇರಿಯಾ ಹರಡುವ ಸೊಳ್ಳೆಗಳು ಸೃಷ್ಟಿಯಾಗುತ್ತದೆ. ಈ ಸೊಳ್ಳೆಗಳಿಂದ ಮಲೇರಿಯಾ, ಡೆಂಗ್ಯು ಸೋಂಕು ತಗುಲುತ್ತದೆ. ಅಲ್ಲದೆ ಡೆಂಗ್ಯು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವಂತೆ ಮಾಡುತ್ತದೆ. 2019ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲಿಯೇ 850ಕ್ಕೂ ಅಧಿಕ ಮಂದಿ ಡೆಂಗ್ಯು ಪೀಡಿತರಾಗಿದ್ದರು. ಇವರಲ್ಲಿ 13 ಮಂದಿ ಡೆಂಗ್ಯು ಸೋಂಕಿಗೆ ಬಲಿಯಾಗಿದ್ದರು. ಸದ್ಯ ಈ ಡೆಂಗ್ಯು, ಮಲೇರಿಯಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಮಂಗಳೂರು ಮನಪಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಕಚೇರಿಗಳ ಸುತ್ತಮುತ್ತ ಸ್ವಚ್ಛತೆ, ಲಾರ್ವ ತೆರವು ಕಾರ್ಯಚರಣೆ ನಡೆಸಲಾಗಿದೆ. ಈ ಕಾರ್ಯಾಚರಣೆ ನಿರಂತರವಾಗಿ ನಡೆಯಬೇಕಿದೆ. ಅಲ್ಲದೆ ಮನೆ, ವಸತಿ ಸಮುಚ್ಛಯಗಳ ಸುತ್ತ ನೀರು ನಿಲ್ಲದಂತೆ ಜಾಗ್ರತೆ ವಹಿಸಿದ್ದಲ್ಲಿ ಡೆಂಗ್ಯು ಮಲೇರಿಯಾ ನಿಯಂತ್ರಣ ಸಾಧ್ಯ.

