ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ತರಬೇತಿಯಿಲ್ಲದೆ ತಲೆಕೂದಲು ಕಸಿ ಮತ್ತು ಸೌಂದರ್ಯಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ನಡೆಯುತ್ತಿರುವ ಬಗ್ಗೆ ದೆಹಲಿ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಈ ಬೆನ್ನಲ್ಲೇ ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಸಲೂನ್ಗಳ ವಿರುದ್ಧ ತನಿಖೆಗೆ ಹೈಕೋರ್ಟ್ ಸೂಚನೆ ನೀಡಿದೆ.
ನಗರದೆಲ್ಲೆಡೆ ಸಲೂನ್ಗಳು ನಾಯಿಕೊಡೆಗಳಂತೆ ಎಲೆ ಎತ್ತುತ್ತಿದ್ದು, ಸ್ವಘೋಷಿತ ತಂತ್ರಜ್ಞರು ವೈದ್ಯಕೀಯ ನೈತಿಕತೆಯನ್ನು ಬದಿಗೊತ್ತಿ, ತಲೆಕೂದಲು ಕಸಿ ಹಾಗೂ ಸೌಂದರ್ಯಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾರೆ ಎಂದು ನ್ಯಾಯಮೂರ್ತಿ ಅನೂಪ್ ಕುಮಾರ್ ಮೆಂಡಿರಟ್ಟ ಪ್ರಕರಣವೊಂದರ ವಿಚಾರಣೆ ವೇಳೆ ಅಭಿಪ್ರಾಯಪಟ್ಟಿದ್ದಾರೆ.
ಕೂದಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಂತರ ವ್ರಣವಾಗಿ (ಗಾಯವಾಗಿ) ಮೃತಪಟ್ಟ 35 ವರ್ಷದ ಅಥರ್ ರಶೀದ್ ಸಾವಿನ ಕುರಿತು ತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲಾಯಿತು.
ಇಂತಹ ಸಲೂನ್ಗಳು ತಲೆ ಎತ್ತುತ್ತಿರುವ ಬಗ್ಗೆ ಪರಿಶೀಲಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ದೆಹಲಿ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಸೌಂದರ್ಯದ ಶಸ್ತ್ರಚಿಕಿತ್ಸೆ ಹಾಗೂ ಕೂದಲು ಕಸಿ ಮಾಡಲು ವೈದ್ಯಕೀಯ ಮಾರ್ಗಸೂಚಿಗಳು ಇಲ್ಲದಿದ್ದರೆ, ಅದಕ್ಕೆ ಸೂಕ್ತ ಕ್ರಮ ರೂಪಿಸಬೇಕು ಎಂದೂ ನ್ಯಾಯಾಲಯ ಹೇಳಿದೆ
ಕೂದಲು ಕಸಿ ವಿಧಾನ ಅಥವಾ ಸೌಂದರ್ಯ ಕಾಪಾಡುವ ಶಸ್ತ್ರಚಿಕಿತ್ಸೆಗಳು ಅನರ್ಹ ವೃತ್ತಿಪರರಿಂದ (ಚಿಕಿತ್ಸೆ ಬಗ್ಗೆ ತಿಳಿಯದೇ ವೃತ್ತಿ ಮಾಡುವವರು) ಮಾರಕವಾಗಬಹುದು ಎನ್ನುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕಿದೆ. ಇದಕ್ಕೆ ಕಟ್ಟುನಿಟ್ಟಿನ ವೈದ್ಯಕೀಯ ಮೇಲ್ವಿಚಾರಣೆಯೂ ಅಗತ್ಯವಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಪ್ರಸ್ತುತ ರಶೀದ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಂ ವರ್ಮಾ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಈತ ಹರೀಶ್ಶರ್ಮಾ ಹಾಗೂ ಇತರರೊಂದಿಗೆ ಯುನೈಟೆಡ್ ಹೇರ್ ಸ್ಟುಡಿಯೋ ನಡೆಸುತ್ತಿದ್ದ. ಶಸ್ತ್ರಚಿಕಿತ್ಸೆಗಾಗಿ ರಶೀದ್ನಿಂದ 30 ಸಾವಿರ ರೂ. ಶುಲ್ಕ ಪಡೆದಿದ್ದ. ಆದರೆ ಕೂದಲು ಕಸಿಗೆ ಕ್ಲಿಯರೆನ್ಸ್ ಪ್ರಮಾಣಪತ್ರ ಹೊಂದಿರಲಿಲ್ಲ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.

