ಚಿತ್ರದುರ್ಗ: ಕಳೆದ 24 ಗಂಟೆಯೊಳಗೆ ಚಿತ್ರದುರ್ಗದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಒಂದೇ ರೀತಿಯ ಅಪಘಾತ ಸಂಭವಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಶ್ರೀರಂಗಾಪುರ ಬಳಿ ಸೋಮವಾರ ಬೆಳ್ಳಂಬೆಳಗ್ಗೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದರು. ಇಂದು ಬೆಳ್ಳಂಬೆಳಗ್ಗೆ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವತಿ ಸೇರಿ ಮೂವರು ಮಹಿಳೆಯರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಿರಿಯೂರು ತಾಲ್ಲೂಕಿನ ಬೀರೆನಹಳ್ಳಿ ಸಮೀಪ ನಡೆದಿದೆ.
ಮೃತರನ್ನು ಸುಧಿಕ್ಷಾ (17), ರೇಣುಕಾದೇವಿ (39) ಹಾಗೂ ವಿಶಾಲಾಕ್ಷಿ (70) ಎಂದು ಗುರುತಿಸಲಾಗಿದೆ. ಇನ್ನು 13 ವರ್ಷದ ಪ್ರತಿಕ್ಷಾ ಗಂಭೀರವಾಗಿ ಗಾಯಗೊಂಡಿದ್ದು ಹಿರಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮದುವೆ ಹಿನ್ನೆಲೆ ಭದ್ರಾವತಿಯಿಂದ ಬೆಂಗಳೂರಿಗೆ ಹೋಗುವಾಗ ಅವಘಡ ಸಂಭವಿಸಿದೆ.
ವೇಗವಾಗಿ ಬಂದಿರುವ ಕಾರು ಮರಕ್ಕೆ ಡಿಕ್ಕಿ ಹೊಡೆದ ಕಾರಣ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
©2021 Tulunada Surya | Developed by CuriousLabs