ಉಳ್ಳಾಲ:ಇಂದು ಬೆಳಗ್ಗೆಯಿಂದ ನಾಪತ್ತೆಯಾಗಿದ್ದ ಲಿಟಲ್ ಕಿಂಡರ್ ಗಾರ್ಡನಿನ ಶಿಕ್ಷಕಿಯ ಮೃತದೇಹ ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರದ ಬಾವಿಯಲ್ಲಿ ಪತ್ತೆಯಾಗಿದೆ.
ಮೃತರನ್ನು ಹರಿಣಾಕ್ಷಿ(50) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಮಕ್ಕಳು ಎದ್ದಾಗ ತಾಯಿ ಹರಿಣಾಕ್ಷಿ ಮನೆಯಲ್ಲಿ ಇರಲಿಲ್ಲವಂತೆ. ಗಾಬರಿಗೊಂಡ ಮಕ್ಕಳು ತಾಯಿಗಾಗಿ ಹುಡುಕಾಟ ನಡೆಸಿದ್ದು ಕೊನೆಗೆ ಉಳ್ಳಾಲ ಪೊಲೀಸರಿಗೂ ವಿಷಯ ತಿಳಿಸಿದ್ದಾರೆ.
ಮಧ್ಯಾಹ್ನದ ವೇಳೆ ಸಮುದಾಯ ಆರೋಗ್ಯ ಕೇಂದ್ರದ ಬಾವಿ ಬಳಿ ಹರಿಣಾಕ್ಷಿ ಅವರು ಧರಿಸುತ್ತಿದ್ದ ಚಪ್ಪಲಿ ದೊರಕಿದೆ. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯ ಈಜು ರಕ್ಷಕರು ಸೇರಿ ಬಾವಿಯೊಳಗಿದ್ದ ಮೃತದೇಹವನ್ನ ಮೇಲಕ್ಕೆತ್ತಿದ್ದಾರೆ. ಉಳ್ಳಾಲ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಹರಿಣಾಕ್ಷಿ ಅವರ ಪತಿ ಬಸವರಾಜ್ ಅವರು ನ್ಯಾಯವಾದಿಯಾಗಿದ್ದು ಶಿವಮೊಗ್ಗದಲ್ಲಿದ್ದಾರೆ. ಹರಿಣಾಕ್ಷಿ ಅವರು ತನ್ನ ಇಬ್ಬರು ಪುತ್ರರೊಂದಿಗೆ ಅಬ್ಬಕ್ಕ ಸರ್ಕಲ್ ನಲ್ಲಿ ನೆಲೆಸಿದ್ದರು. ಮನೆಯ ಕಟ್ಟಡದಲ್ಲೇ ಸ್ವಂತ ನರ್ಸರಿಯಲ್ಲಿ ಎಲ್ ಕೆಜಿ, ಯುಕೆಜಿ ಮಕ್ಕಳಿಗೆ ಶಿಕ್ಷಣ, ಟ್ಯೂಷನ್ ನೀಡುತ್ತಿದ್ದರು. ಹರಿಣಾಕ್ಷಿ ಅವರ ಹಿರಿಯ ಪುತ್ರ ಇನ್ಫೋಸಿಸ್ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿದ್ದಾರೆ. ಕಿರಿಯ ಪುತ್ರ ಡಿಗ್ರಿ ವ್ಯಾಸಂಗ ನಡೆಸುತ್ತಿದ್ದಾನೆ.