ಮಂಗಳೂರು : ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬ ವಾಕ್ಯವನ್ನು ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಚಿಂತನೆಯಡಿ ಮಂಗಳೂರು ದಸರಾ ಆಯೋಜನೆಗೊಳ್ಳುತ್ತಿದೆ. ಅದರಂತೆ ಸಿರೋ- ಮಲಬಾರ್ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕುಝಿ, ಕುದ್ರೋಳಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡರು. ಬಿಷಪ್, ಶ್ರೀಗೋಕರ್ಣನಾಥ ಹಾಗೂ ಪರಿವಾರ ದೇವರು ಮತ್ತು ಶ್ರೀ ಶಾರದಾ ಮಾತೆ – ನವದುರ್ಗೆಯರ ದರುಶನ ಪಡೆದರು. ಈ ವೇಳೆ ಕುದ್ರೋಳಿ ಕ್ಷೇತ್ರದಲ್ಲಿ ಜಾತಿ ಮತ ಬೇಧವಿಲ್ಲದೆ ನಡೆಯುತ್ತಿರುವ ಉತ್ಸವ ಮಾದರಿ ಎಂದು ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭ ಕಂಕನಾಡಿ ಆಲ್ಫೋನ್ಸ್ ಚರ್ಚ್ ಧರ್ಮಗುರು ಫಾ.ಮಾಣಿ, ಬೆಳ್ತಂಗಡಿ ಧರ್ಮಪ್ರಾಂತ್ಯ ಪಿಆರ್‌ಓ ಸೆಬಾಸ್ಟಿಯನ್ ಕೆ.ವಿ. ಜತೆಗಿದ್ದರು. ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್., ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
©2021 Tulunada Surya | Developed by CuriousLabs