ಮಂಗಳೂರು: ಜಾನುವಾರುಗಳಿಗೆ ಬರುವ ಚರ್ಮಗಂಟು ರೋಗದ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಕೆ.ಪಿ ಹೇಳಿದರು.
ಕುಲಶೇಖರ ಹಾಲು ಉತ್ಪಾದಕರ ಒಕ್ಕೂಟದ ಕಚೇರಿಯಲ್ಲಿ ಭಾನುವಾರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಜಿಲ್ಲಾ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಆಶ್ರಯದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಅಧಿಕಾರಿಗಳು ಜಿಲ್ಲೆಯಲ್ಲಿರುವ ಜಾನುವಾರುಗಳಿಗೆ ಬರುವ ಚರ್ಮಗಂಟು ರೋಗದ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಹಾಗೂ ಅಗತ್ಯವಿರುವ ಲಸಿಕೆ ಮತ್ತು ಔಷಧಿಗಳನ್ನು ಒಕ್ಕೂಟದಿಂದ ಪೂರೈಸುವ ಬಗ್ಗೆ ಭರವಸೆ ನೀಡಿದರು. ಜಿಲ್ಲಾ ಹಾಲು ಉತ್ಪಾದಕ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಅಶೋಕ್, ಡಾ. ನಿತ್ಯಾನಂದ, ಜಿಲ್ಲಾ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಅರುಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಬಿಳಿಯೂರಿನಲ್ಲಿ ಮುಂಜಾಗ್ರತಾ ಕ್ರಮ: ಬಂಟ್ವಾಳ ತಾಲ್ಲೂಕಿನ ಬಿಳಿಯೂರು ಗ್ರಾಮದಲ್ಲಿ ಚರ್ಮಗಂಟು ರೋಗದ ಒಂದು ಶಂಕಿತ ಪ್ರಕರಣ ದಾಖಲಾಗಿದ್ದು ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಅರುಣ್ ಕುಮಾರ್ ಶೆಟ್ಟಿ ಹೇಳಿದರು. ಈಗಾಗಲೇ ಆ ಗ್ರಾಮದ ಸುತ್ತಮುತ್ತಲಿನ 600ಜಾನುವಾರುಗಳಿಗೆ ಒಟ್ಟು 2000ಡೋಸ್ ಲಸಿಕೆ ಹಾಕಲಾಗಿದೆ. ರೋಗ ಹರಡಲು ಕಾರಣವಾಗುವ ಸೊಳ್ಳೆ, ನೊಣ ಹಾಗೂ ಉಣ್ಣೆ ನಿಯಂತ್ರಣಕ್ಕಾಗಿ ಫಾಗಿಂಗ್ ಹಾಗೂ ಕ್ರಿಮಿನಾಶಕ ಸಿಂಪಡಣೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.
