Tuesday, July 16, 2024
spot_img
More

  Latest Posts

  ಹೃದಯಾಘಾತದಿಂದ ಕನ್ನಡದ ‘ಖ್ಯಾತ ವಿಮರ್ಶಕ ಜಿ.ಹೆಚ್ ನಾಯಕ’ ನಿಧನ

  ಮೈಸೂರು: ಕನ್ನಡ ಸಾಹಿತ್ಯ ಲೋಕದಲ್ಲಿ ವಿಮರ್ಶಕರಾಗಿ ಹೆಸರು ಗಳಿಸಿದ್ದಂತ ಖ್ಯಾತ ವಿಮರ್ಶಕ ಜಿ.ಹೆಚ್ ನಾಯಕ(88) ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಮೂಲಕ ಸಾಹಿತ್ಯ ಲೋಕದ ಕೊಂಡಿಯೊಂದು ಕಳಜಿದಂತೆ ಆಗಿದೆ.

  ಮೈಸೂರಿನಲ್ಲಿ ಇಂದು ದಿಢೀರ್ ಹೃದಯಾಘಾತದಿಂದ ಕನ್ನಡದ ಖ್ಯಾತ ವಿಮರ್ಶಕ, ಪ್ರಾಧ್ಯಾಪಕ ಜಿ.ಹೆಚ್ ನಾಯಕ(88) ಅವರು ಇಂದು ನಿಧನರಾಗಿದ್ದಾರೆ.

  ಅಂದಹಾಗೇ ‘ಜಿ.ಎಚ್. ನಾಯಕ’ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಿರುವ ವಿಮರ್ಶಕ ಗೋವಿಂದರಾಯ ಹಮ್ಮಣ್ಣ ನಾಯಕ ಅವರು ಜನಿಸಿದ್ದು 1935ರ ಸೆಪ್ಟೆಂಬರ್ 18ರಂದು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಸೂರ್ವೆ ಗ್ರಾಮದವರು. ಮೈಸೂರಿನ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರು. ಹಂಪಿಯ ಕನ್ನಡ ವಿಶ್ವವಿದ್ಯಾಲಯ (1994-95) ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕಾವ್ಯಾಧ್ಯಯನ ಪೀಠ (1996-97)ಗಳ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದರು.

  ಸಮಕಾಲೀನ (1973), ಅನಿವಾರ್ಯ (1980), ನಿರಪೇಕ್ಷ (1984), ನಿಜದನಿ (1988), ಸಕಾಲಿಕ (1995), ಗುಣಗೌರವ (2002), ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ (2002), ದಲಿತ ಹೋರಾಟ: ಗಂಭೀರ ಸವಾಲುಗಳು (2004), ಸ್ಥಿತಿಪ್ರಜ್ಞೆ (2007), ಮತ್ತೆ ಮತ್ತೆ ಪಂಪ (2008), ಸಾಹಿತ್ಯ ಸಮೀಕ್ಷೆ (2009). ಉತ್ತರಾರ್ಧ (2011) ಅವರ ವಿಮರ್ಶಾ ಕೃತಿಗಳಾಗಿವೆ.

  ಕನ್ನಡ ಸಣ್ಣ ಕಥೆಗಳು (1978), ಹೊಸಗನ್ನಡ ಕವಿತೆ (1985), ಶತಮಾನದ ಕನ್ನಡ ಸಾಹಿತ್ಯ ಸಂ. 2 (2000) ಶತಮಾನದ ಕನ್ನಡ ಸಾಹಿತ್ಯ ಸಂ. 2 (2009) ಕೃತಿಗಳನ್ನು ಸಂಪಾದಿಸಿದ್ದರು.

  ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅತ್ಯುತ್ತಮ ಸಾಹಿತ್ಯ ವಿಮರ್ಶೆ ಪ್ರಶಸ್ತಿಯು ‘ನಿರಪೇಕ್ಷ’ (1985), ವಿ. ಎಂ. ಇನಾಂದರ್‌ ವಿಮರ್ಶೆ ಪ್ರಶಸ್ತಿ ‘ನಿಜದನಿ’ (1989)ಗೆ ಸಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (19990), ಕರ್ನಾಟಕ ರಾಜ್ಯ ಪ್ರಶಸ್ತಿ (2000), ಜಿ. ಎಸ್. ಶಿವರುದ್ರಪ್ಪ ವಿಮರ್ಶೆ ಪ್ರಶಸ್ತಿ (2004), ಶಿವರಾಮ ಕಾರಂತ ಪ್ರಶಸ್ತಿ (20009), ಪಂಪ ಪ್ರಶಸ್ತಿ (2010), ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಡಿ. ಲಿಟ್ ಪದವಿ (2014), ತೀನಂಶ್ರೀ ವಿಮರ್ಶೆ ಪ್ರಶಸ್ತಿ (2014) ಅವರಿಗೆ ದೊರೆತ ಗೌರವಗಳಾಗಿವೆ.

  ಅಮೆರಿಕದ ಮ್ಯಾಡಿಸನ್ ವಿಸ್ಕಾನ್ಸಿನ್ ವಿಶ್ವವಿದ್ಯಾನಿಲಯ (1983) ಹಾಗೂ ಅಮೆರಿಕ ಸರ್ಕಾರದದ ಅತಿಥಿಯಾಗಿ ಅಮೆರಿಕ (2000) ಪ್ರವಾಸ ಮಾಡಿದ್ದ ಅವರು ಇಂಗ್ಲೆಂಡ್ (2000) ಮತ್ತು ಚೀನಾ (2006)ಗಳಿಗೂ ಭೇಟಿ ನೀಡಿದ್ದರು. ಇಂತಹ ಕನ್ನಡದ ಖ್ಯಾತ ವಿಮರ್ಶಕ ಇಂದು ಮೈಸೂರಿನಲ್ಲಿ ಹೃದಯಾಘಾತದಿಂದ ನಿಧನರಾಗುವ ಮೂಲಕ, ಇನ್ನಿಲ್ಲವಾಗಿದ್ದಾರೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss