ಬೆಂಗಳೂರು: ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ವಿರುದ್ಧ ಯಾವುದೇ ರೀತಿಯ ಅವಹೇಳನಕಾರಿ ವರದಿ ಮಾಡದಂತೆ ಹಾಗೂ ಈಗಾಗಲೇ ಮಾಡಿರುವ ವರದಿಗಳನ್ನು ತೆಗೆದು ಹಾಕುವಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ. ಈ ಸಂಬಂಧ ವಾದಿಗಳಾದ ಶೀನಪ್ಪ ಮತ್ತಿತರರು ಸಲ್ಲಿಸಿರುವ ಅಸಲು ದಾವೆಯನ್ನು ಸಿಸಿಎಚ್–11ನೇ ನ್ಯಾಯಾಲಯ ವಿಚಾರಣೆ ನಡೆಸಿ ಇದೇ 19ರಂದು ಈ ಕುರಿತಂತೆ ಆದೇಶಿಸಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನಡೆಸುತ್ತಿರುವಂತಹ ಸಂಸ್ಥೆಗಳು ಹಾಗೂ ಅವರ ಕುಟುಂಬಸ್ಥರ ವಿರುದ್ಧ ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆ್ಯಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್, ಯೂ–ಟ್ಯೂಬ್, ಟಿ.ವಿ.ಚಾನೆಲ್ ಹಾಗೂ ಇತರೆ ಯಾವುದೇ ರೀತಿಯ ಮಾಧ್ಯಮ ಪ್ರಕಾರಗಳಲ್ಲಿ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಹೇಳನಕಾರಿ ವರದಿ ಅಥವಾ ಮಾತನಾಡಬಾರದು‘ ಎಂದು ನಿರ್ಬಂಧಿಸಿ ಆದೇಶಿಸಿದೆ. ಅಂತೆಯೇ, ‘ಈಗಾಗಲೇ ಈ ಸಂಬಂಧ ಪ್ರಕಟಿಸಲಾಗಿರುವ ವರದಿಗಳನ್ನ ಅಳಿಸಿ ಹಾಕಬೇಕು‘ ಎಂದು ಆದೇಶಿಸಿರುವ ನ್ಯಾಯಾಧೀಶರು, 61 ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ್ದು ವಿಚಾರಣೆ ಮುಂದೂಡಿದ್ದಾರೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲ ರಾಜಶೇಖರ ಎಸ್.ಹಿಲ್ಯಾರು ಮತ್ತು ಮಂಗಳೂರಿನ ಮಯೂರ ಕೀರ್ತಿ ವಾದ ಮಂಡಿಸಿದರು.
©2021 Tulunada Surya | Developed by CuriousLabs