ಥೈಕುಡಂ ಬ್ರಿಡ್ಜ್ ಸಂಗೀತ ಬ್ಯಾಂಡ್‌ನ ಅನುಮತಿಯಿಲ್ಲದೇ “ವರಾಹ ರೂಪಂ’ ಹಾಡನ್ನು ಪ್ರಸಾರ ಮಾಡುವಂತಿಲ್ಲ ಎಂದು “ಕಾಂತಾರ’ ಚಿತ್ರತಂಡಕ್ಕೆ ಕೇರಳದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನಿರ್ಬಂಧ ಹೇರಿದೆ.
ಥಿಯೇಟರ್‌ಗಳಲ್ಲಿ ಹಾಗೂ ಸ್ಟ್ರೀಮಿಂಗ್ ಪ್ಲಾಟ್‌ಫಾರಂಗಳಲ್ಲಿ ಈ ಹಾಡಿನ ಪ್ರಸಾರವನ್ನು ಸ್ಥಗಿತಗೊಳಿಸುವಂತೆ ಶುಕ್ರವಾರ ನ್ಯಾಯಾಲಯ ಆದೇಶಿಸಿದೆ. “ಕಾಂತಾರ’ ಸಿನಿಮಾದಲ್ಲಿನ ವರಾಹ ರೂಪಂ ಹಾಡಿನ ಕೆಲವು ಭಾಗಗಳನ್ನು ನಮ್ಮ ಒರಿಜಿನಲ್ “ನವರಸಂ’ ಹಾಡಿನಿಂದ ನೇರವಾಗಿ ಎತ್ತಲಾಗಿದೆ ಎಂದು ಆರೋಪಿಸಿ ಥೈಕುಡಂ ಬ್ರಿಡ್ಜ್ ಸಂಗೀತ ಬ್ಯಾಂಡ್ ಕೇರಳದ ಕೋರ್ಟ್ ಮೆಟ್ಟಿಲೇರಿತ್ತು.
ಈ ಹಿನ್ನೆಲೆಯಲ್ಲಿ ಶುಕ್ರವಾರ ಆದೇಶ ಹೊರಡಿಸಿರುವ ಕೋರ್ಟ್, “ವರಾಹ ರೂಪಂ ಹಾಡಿನ ಪ್ರಸಾರ ಕೂಡಲೇ ಸ್ಥಗಿತಗೊಳಿಸಬೇಕು’ ಎಂದು ಕಾಂತಾರ ಚಿತ್ರತಂಡಕ್ಕೆ ಸೂಚಿಸಿದೆ. ಜತೆಗೆ, ಬ್ಯಾಂಡ್‌ನ ಒಪ್ಪಿಗೆಯಿಲ್ಲದೇ ಹಾಡನ್ನು ಬಳಸಬಾರದು ಎಂದು ಅಮೆಜಾನ್, ಯೂಟ್ಯೂಬ್, ನ್ಪೋಟಿಫೈ, ಜಿಯೋಸಾವನ್ ಮತ್ತು ಇತರೆ ಸಂಗೀತ ವಿತರಣಾ ಪ್ಲಾಟ್‌ಫಾರಂಗಳಿಗೆ ನಿರ್ದೇಶನ ನೀಡಿದೆ.
