ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ 2022 ಅಂಗವಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಸಹಕಾರಿ ಸಪ್ತಾಹ ಕಾರ್ಯಕ್ರಮ ದಲ್ಲಿ ಕರ್ನಾಟಕ ಸರಕಾರದ ಸಹಕಾರ ಇಲಾಖೆಯ ಗೌರವಾನ್ವಿತ ಸಚಿವರಾದ ಶ್ರೀ ಎಸ್. ಟಿ ಸೋಮಶೇಖರ್ ರವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರೂ, ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಲಿ. ಉಡುಪಿ ಅಧ್ಯಕ್ಷರಾದ ಶ್ರೀ ಯಶ್ ಪಾಲ್ ಎ. ಸುವರ್ಣ ರವರಿಗೆ ಸಹಕಾರ ರತ್ನ ಪ್ರಶಸ್ತಿಯನ್ನು ನೀಡಿ ಅಭಿನಂದಿಸಿದರು.

ಕಳೆದ 13 ವರ್ಷಗಳಿಂದ ನಿರಂತರ 3ನೇ ಅವಧಿಗೆ ಪ್ರತಿಷ್ಟಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾಗಿ ಸಂಸ್ಥೆಯ ಸಾರಥ್ಯ ವಹಿಸಿ, ಆರ್ಥಿಕ ಸಂಕಷ್ಟದಲ್ಲಿದ್ದ ಸಂಸ್ಥೆಯನ್ನು ತಮ್ಮ ದಕ್ಷ ಆಡಳಿತ ಮತ್ತು ಮೀನುಗಾರಿಕೆ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಫೆಡರೇಶನ್ ಮೂಲಕ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ನಿರಂತರ ಲಾಭದಾಯಕ ಸಂಸ್ಥೆಯನ್ನಾಗಿ ಮೀನುಗಾರರ ಜೀವನಾಡಿಯಾಗಿ ರೂಪಿಸಿದ ಸಾಧನೆಯ ಗರಿಮೆಗೆ ಯಶ್ ಪಾಲ್ ಸುವರ್ಣ ಪಾತ್ರರಾಗಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಟಿತ ಪಟ್ಟಣ ಸಹಕಾರಿ ಬ್ಯಾಂಕ್ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಲಿ. ಉಡುಪಿ ಇದರ ಅಧ್ಯಕ್ಷರಾಗಿ ಸಂಸ್ಥೆಯ ನಿರ್ದೇಶಕರಾಗಿ, 2018 ರಲ್ಲಿ ಬ್ಯಾಂಕಿನ ಅಧ್ಯಕರಾಗಿ ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿ ದಾಖಲೆಯ ಮಟ್ಟದಲ್ಲಿ ನಿರಂತರ ವ್ಯವಹಾರಿಕ ಪ್ರಗತಿಯೊಂದಿಗೆ ಗರಿಷ್ಠ ಲಾಭವನ್ನು ದಾಖಲಿಸಿದೆ. ತಮ್ಮ ಅಧ್ಯಕ್ಷತೆಯಲ್ಲಿ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಕರ್ನಾಟಕ ರಾಜ್ಯ ಸಹಕಾರ ಇಲಾಖೆಯ 2022ನೇ ಸಾಲಿನ ಅತ್ಯುತ್ತಮ ಪಟ್ಟಣ ಸಹಕಾರಿ ಬ್ಯಾಂಕ್ ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ಯುವ ಸಹಕಾರಿ ಮುಖಂಡ ಯಶ್ ಪಾಲ್ ಸುವರ್ಣ ರವರ ಸಾಧನೆಯ ಕಿರೀಟದ ಮುಕುಟಮಣಿಯಾಗಿ ಶೋಭಿಸುತ್ತಿದೆ.
ಮೀನುಗಾರ ಸಹಕಾರ ಕ್ಷೇತ್ರದ ವಿಶಿಷ್ಟ ಸಾಧನೆಗಾಗಿ ಸಹಕಾರ ರತ್ನ ಗೌರವಕ್ಕೆ ಪಾತ್ರರಾದ ಪ್ರಥಮ ಮೀನುಗಾರಿಕೆ ಸಹಕಾರ ಮುಖಂಡ ಹಾಗೂ ಅತೀ ಕಿರಿಯ ವಯಸ್ಸಿನಲ್ಲಿ ಅತ್ಯುನ್ನತ ಗೌರವಕ್ಕೆ ಭಾಜನರಾದ ಹೆಗ್ಗಳಿಕೆಗೆ ಶ್ರೀ ಯಶ್ ಪಾಲ್ ಸುವರ್ಣ ಪಾತ್ರರಾಗಿದ್ದಾರೆ.

ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ. ಎಂ ಎನ್ ರಾಜೇಂದ್ರ ಕುಮಾರ್, ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ವೇದವ್ಯಾಸ ಕಾಮತ್, ಅದಾನಿ ಸಮೂಹ ಸಂಸ್ಥೆಯ ಶ್ರೀ ಕಿಶೋರ್ ಆಳ್ವಾ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಮುಖಂಡರು, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
