ದೀಸ್ಸು: ಯುವತಿಯೊಂದಿಗೆ ಸಂಭೋಗ ಮಾಡುತ್ತಿದ್ದ ಖಾಸಗಿ ವಿಡಿಯೋವೊಂದು ಸೋರಿಕೆಯಾದ ಬೆನ್ನಲ್ಲೇ 72 ವರ್ಷದ ವೃದ್ಧನೊಬ್ಬ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಸ್ಸಾಂನ ಜೊರ್ಹಾತ್ ಜಿಲ್ಲೆಯಲ್ಲಿ ನಡೆದಿದೆ. ತನ್ನೊಂದಿಗೆ ಸಂಭೋಗ ಮಾಡುತ್ತಿದ್ದ ವೃದ್ಧನ ವೀಡಿಯೋವನ್ನು ವೈರಲ್ ಮಾಡಿರುವ ಕಾಲೇಜು ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದಾರೆ.
ದರ್ಶನಾ ಭಾರಾಲಿ ಆರೋಪಿ ಯುವತಿ. ಈಕೆ ವೃದ್ಧನಿಗೆ ಬಲೆ ಬೀಸಿ ಆತನನ್ನು ಮರುಳು ಮಾಡಿ ಸಂಭೋಗ ನಡೆಸಿ, ಮೊಬೈಲ್ ಕ್ಯಾಮೆರಾದಿಂದ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಳು. ಬಳಿಕ ಅದನ್ನು ಪೋರ್ನ್ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿರುವ ಆರೋಪ ದರ್ಶನಾ ವಿರುದ್ಧ ಕೇಳಿಬಂದಿದೆ.
ಈ ಅಶ್ಲೀಲ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ವೃದ್ಧ ಮತ್ತು ಆತನ ಕುಟುಂಬದ ಮಾನಹಾನಿಯಾಗಿದೆ. ವಿಡಿಯೋದಿಂದ ಉಂಟಾದ ಮುಜುಗರ ಮತ್ತು ಅವಮಾನವನ್ನು ಸಹಿಸಲಾಗದ ಸಂತ್ರಸ್ತ ವೃದ್ಧ ತನ್ನ ಜೀವನವನ್ನು ಕೊನೆಗೊಳಿಸುವ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಆರೋಪಿತೆ ಯುವತಿಗೆ ಕಠಿಣ ಶಿಕ್ಷೆಯಾಗಬೇಕೆಂದು ಮೃತ ವೃದ್ಧನ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಸ್ಥಳೀಯ ಪೊಲೀಸರು ಆರೋಪಿ ಯುವತಿಯನ್ನು ಬಂಧಿಸಿದ್ದು, ಆಕೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆಕೆ ಏಕಾಂಗಿಯಾಗಿ ಕೃತ್ಯ ಎಸಗಿದ್ದಾಳೆಯೇ? ಅಥವಾ ಆಕೆಯೊಂದಿಗೆ ಯಾರಾದರೂ ಕೈಜೋಡಿಸಿದ್ದಾರಾ ಎಂಬ ಆಯಾಮದ ಮೇಲೆ ಹೆಚ್ಚಿನ ತನಿಖೆ ಪ್ರಸ್ತುತ ನಡೆಯುತ್ತಿದೆ.