ಮಂಗಳೂರು: 12ದಿನಗಳಿಂದ ಕುಡಿಯುವ ನೀರು ಬರುತ್ತಿಲ್ಲ ಎಂದು ದೂರಿದ ನಾಗರೀಕರನ್ನೇ ನಗರದ ಬಿಜೆಪಿಯ ಮಹಿಳಾ ಕಾರ್ಪೊರೇಟರ್ ತರಾಟೆಗೆ ತೆಗೆದುಕೊಂಡ ಘಟನೆ ಉರ್ವಾಸ್ಟೋರ್ ಸಮೀಪದ ಸುಂಕದಕಟ್ಟೆ ಎಂಬಲ್ಲಿ ವರದಿಯಾಗಿದ್ದು, ಮಹಿಳಾ ಕಾರ್ಪೊರೇಟರ್ ವಾಗ್ದಾಳಿಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಉರ್ವಾಸ್ಟೋರ್ ಸಮೀಪದ ಸುಂಕದಕಟ್ಟೆ ಎಂಬಲ್ಲಿ ಕಳೆದ 12 ದಿನಗಳಿಂದ ಕುಡಿಯುವ ನೀರು ಸರಬರಾಜಾಗುತ್ತಿಲ್ಲ ಎಂದು ಆರೋಪಿಸಿದ ನಾಗರೀಕರು ಡಿವೈಎಫ್‌ಐ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್, ಆಯುಕ್ತರಿಗೆ ದೂರು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಸುಂಕದಕಟ್ಟೆ ಪ್ರದೇಶಕ್ಕೆ ಬಂದ ಬಿಜೆಪಿ ಕಾರ್ಪೊರೇಟರ್ ಜಯಲಕ್ಷ್ಮೀ ಶೆಟ್ಟಿ, ಕಸಕಡ್ಡಿ ತುಂಬಿದ್ದ ಕಾರಣ ಮೂರು ದಿನಗಳಿಂದ ನೀರಿರಲಿಲ್ಲ. ಇಡೀ ಊರಿನವರಿಗೆ ನೀರಿನ ಸಮಸ್ಯೆ ಇಲ್ಲ. ಕೇವಲ ನಿಮಗೆ ಮಾತ್ರ ಇಲ್ಲಿ ನೀರಿನ ಸಮಸ್ಯೆ ಇರುವುದು. ಧ್ವೇಷದಿಂದ ಈ ರೀತಿ ಆರೋಪ ಮಾಡುತ್ತಿದ್ದೀರಿ ಎಂದು ಗ್ರಾಮಸ್ಥರನ್ನು ಗಧರಿಸಿದ್ದಾರೆ. ಈ ವೇಳೆ ಗ್ರಾಮದ ಮಹಿಳೆಯರು ಕಾರ್ಪೊರೇಟರ್ ಜೊತೆ ವಾಗ್ವಾದಕ್ಕೆ ಇಳಿದಿದ್ದು, ನಾವು ನಿಮಗೆ ಮತ ಹಾಕಿದೇವೆ ಎಂದು ತಿರುಗೇಟು ನೀಡಿದ್ದಾರೆ. ನಿಮ್ಮ ಅಭ್ಯಾಸವೇ ಹೀಗೆ ಎಂದು ಗ್ರಾಮಸ್ಥರನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ. ಆಗ ಕೆಂಡಾಮಂಡಲರಾದ ಗ್ರಾಮದ ಮಹಿಳೆಯರು ನೀವು ನಾಲಗೆ ಮಾರಿಕೊಂಡಿದ್ದೀರಿ. ನಿಮ್ಮ ನಾಲಗೆಯೇ ಸರಿ ಇಲ್ಲ ಎಂದು ಕಾರ್ಪೊರೇಟರ್ ಅವರ ಬಾಯಿಮುಚ್ಚಿಸಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬಿಜೆಪಿ ಕಾರ್ಪೊರೇಟರ್ ಜಯಲಕ್ಷ್ಮೀ ಶೆಟ್ಟಿ ಅವರ ನಡೆಯ ವಿರುದ್ಧ ಅಸಮಾಧನ ವ್ಯಕ್ತವಾಗುತ್ತಿದೆ.