ಉಡುಪಿ: ರಾಜಕೀಯ ವೈಷಮ್ಯಕ್ಕೆ ಮಕ್ಕಳ ಯಕ್ಷಗಾನ ಪ್ರದರ್ಶನವು ಅರ್ಧಕ್ಕೆ ನಿಂತು ಹೋದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೇರಿಕುದ್ರುವಿನಲ್ಲಿ ನಡೆದಿದೆ.
ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯಿಂದ ಮಕ್ಕಳ ಯಕ್ಷಗಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾತ್ರಿ 10:30 ರ ವರೆಗೆ ಯಕ್ಷಗಾನ ನಡೆಸಲು ಸಮಿತಿ ಅನುಮತಿ ಪಡೆದಿದ್ದರು. ಆದರೆ, ನಿಗದಿತ ಅವಧಿಕ್ಕಿಂತ ಹೆಚ್ಚಿನ ಸಮಯದವರೆಗೂ ಯಕ್ಷಗಾನ ಪ್ರದರ್ಶನವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸ್ ಠಾಣೆಗೆ ಆನೆಗಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉದಯ ಪೂಜಾರಿ ದೂರು ನೀಡಿದ್ದರು. ದೂರಿನ ಹಿನ್ನಲೆ ಪೊಲೀಸರು ಮಕ್ಕಳ ಯಕ್ಷಗಾನವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಯಕ್ಷಗಾನದಲ್ಲಿ ಭಾಗವಹಿಸಬೇಕಿದ್ದ ಭಾಗವತರ ಅನಾರೋಗ್ಯದಿಂದ ವಿಳಂಬವಾಗಿದ್ದು, ಒಂದು ಗಂಟೆ ತಡವಾಗಿ ಕಾರ್ಯಕ್ರಮ ಆರಂಭವಾಗಿದೆ. ಅವಧಿ ಮುಗಿದ ಬಳಿಕ ಯಕ್ಷಗಾನ ನಡೆಸುತ್ತಿರುವ ಕುರಿತು ಉದಯ ಪೂಜಾರಿ ದೂರು ನೀಡಿದ್ದರು. ಅವರು, ರಾಜಕೀಯ ಪ್ರೇರಿತವಾಗಿ ಯಕ್ಷಗಾನ ನಿಲ್ಲಿಸಲು ಯತ್ನಿಸಿದ್ದಾರೆ ಎಂದು ಆಯೋಜಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.