ಮಂಗಳೂರು: ನಗರದ ಆಟೋ ರಿಕ್ಷಾ ಚಾಲಕರಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಹೊಸ ಆದೇಶವೊಂದನ್ನು ನೀಡಿದೆ.ಮಂಗಳೂರು ನಗರ ವ್ಯಾಪ್ತಿಯ ವಲಯ 1 ಹಾಗೂ ಗ್ರಾಮಾಂತರ ವ್ಯಾಪ್ತಿಯ ವಲಯ 2 ರ ಆಟೋ ರಿಕ್ಷಾಗಳು ಜಿಲ್ಲಾಡಳಿತದ ಸೂಚನೆಯ ಅನ್ವಯ ಇನ್ನು ಮುಂದಿನ ದಿನಗಳಲ್ಲಿ ಬಣ್ಣದ ಜೊತೆಗೆ ಪೊಲೀಸ್ ಇಲಾಖೆ ನೀಡುವ ಗುರುತು ಸ್ಟಿಕ್ಕರ್ ಅನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕೆಂದು ತಿಳಿಸಲಾಗಿದೆ .ವಲಯ ಒಂದು ಮತ್ತು ಎರಡರಲ್ಲಿ ಬರುವ ಎಲ್ಲಾ ಮಾದರಿಯ ಆಟೋ ರಿಕ್ಷಾಗಳು (ಪೆಟ್ರೋಲ್ ಮಾತ್ರವಲ್ಲದೇ ಎಲೆಕ್ಟ್ರಿಕಲ್, ಸಿಎನ್ ಜಿ ಹಾಗೂ ಡೀಸೆಲ್ ಆಟೋಗಳು) ಕಡ್ಡಾಯವಾಗಿ ಜಿಲ್ಲಾಡಳಿತ ನಿಗದಿಪಡಿಸಿದ ಬಣ್ಣವನ್ನೇ ಕಡ್ಡಾಯವಾಗಿ ಹಾಕಬೇಕೆಂದು ಹೇಳಲಾಗಿದ್ದು, ಯಾವುದೇ ಕಾರಣಕ್ಕೂ ಆ ಬಣ್ಣಗಳ ಸ್ಟಿಕ್ಕರ್ ಕಟ್ಟಿಂಗ್ ಮಾಡಿಕೊಳ್ಳುವಂತಿಲ್ಲ ಎಂದು ಜಿಲ್ಲಾಡಳಿತವು ಸ್ಪಷ್ಟ ಆದೇಶ ಹೊರಡಿಸಿದೆ.ಸದ್ಯ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುವಂತಹ ಬಹುತೇಕ ಎಲ್ಲ ಆಟೋ ರಿಕ್ಷಾಗಳು ಕಪ್ಪು ಮತ್ತು ಹಳದಿ ಬಣ್ಣವನ್ನು ಹೊಂದಿದೆ. ಇನ್ನು ಮುಂದಿನ ದಿನಗಳಲ್ಲಿ ವಲಯ 1 ರ ನಗರ ವ್ಯಾಪ್ತಿಯ ಆಟೋಗಳು ಹಳದಿ ಮತ್ತು ಕಪ್ಪು ಹಾಗೂ ಗ್ರಾಮಾಂತರ (ವಲಯ-2) ರಲ್ಲಿ ಬರುವ ಆಟೋ ರಿಕ್ಷಾ ಗಳಿಗೆ ಹಸಿರು ಹಾಗೂ ಹಳದಿ ಬಣ್ಣ ಹಾಕಿಸಿಕೊಳ್ಳಬೇಕಾಗಿದೆ.ಟ್ರಾಫಿಕ್ ಪೊಲೀಸರಿಗೆ ಬಣ್ಣ ಬದಲಾವಣೆಯ ಮೂಲಕ ಸುಲಭವಾಗಿ ಆಟೋ ರಿಕ್ಷಾಗಳ ವ್ಯಾಪ್ತಿಯನ್ನು ಅಂದಾಜಿಸಬಹುದಾಗಿದೆ. ಆಯಾ ವಲಯಗಳ ಆಟೋಗಳು ಬೇರೆ ವಲಯಗಳಿಗೆ ಸಂಚರಿಸುವ ಹಾಗಿಲ್ಲ. ಹೀಗಾಗಿ ಆಟೋಗಳ ವ್ಯಾಪ್ತಿಯನ್ನು ನಿರ್ಧರಿಸಿಕೊಳ್ಳಲು ಬಣ್ಣ ಬದಲಾವಣೆ ಅನುಕೂಲವಾಗಲಿದ್ದು, ಆ ಮೂಲಕ ಗೊಂದಲಗಳಿಗೆ ತೆರೆ ಎಳೆಯಲು ಸಾಧ್ಯವಾಗಲಿದೆ.ಅನಾರೋಗ್ಯದಂತಹ ತುರ್ತು ಸಂದರ್ಭದಲ್ಲಿ ಸೇವೆ ಸಲ್ಲಿಸುವ ಆಟೋ ರಿಕ್ಷಾಗಳು ಮಾತ್ರ ತಮ್ಮ ವ್ಯಾಪ್ತಿಯನ್ನು ಮೀರಬಹುದಾಗಿದ್ದು,ಇಂತಹ ಸಂದರ್ಭಗಳಲ್ಲಿ ಅಗತ್ಯ ದಾಖಲಾತಿ ಇಟ್ಟುಕೊಳ್ಳಬೇಕಾಗುತ್ತದೆ.ಇದನ್ನು ಹೊರತುಪಡಿಸಿ ತಮ್ಮ ವ್ಯಾಪ್ತಿ ಮೀರಿದ್ದಲ್ಲಿ ಸಂಬಂಧಿಸಿದ ಪ್ರಾಧಿಕಾರದವರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.ವಲಯ 1 ಹಾಗೂ ವಲಯ 2ಕ್ಕೆ ಪೊಲೀಸ್ ಇಲಾಖೆಯಿಂದ ನೀಡುವ ಗುರುತು ಸ್ಟಿಕ್ಕರ್ ಅನ್ನು ಕಡ್ಡಾಯವಾಗಿ ಅಳವಡಿಸಬೇಕಾಗುತ್ತದೆ. ವಲಯ 1 ರ ಸ್ಟಿಕ್ಕರ್ ಚೌಕಾಕಾರದಲ್ಲಿದ್ದರೆ, ವಲಯ 2 ರ ಸ್ಟಿಕ್ಕರ್ ವೃತ್ತಾಕಾರದಲ್ಲಿ ಇರಲಿದೆ.ಆಟೋಗಳಿಗೆಇಂಧನ ಅಥವಾ ಎಲ್ ಪಿ ಜಿ ತುಂಬಿಸಿಕೊಂಡು ಹಿಂತಿರುಗುವಾಗ ಕೂಡಾ ಯಾವುದೇ ಕ್ರಮ ಕೈಗೊಳ್ಳಲು ಅವಕಾಶವಿರುವುದಿಲ್ಲ. ಆದರೆ ಈ ವೇಳೆ ಯಾವುದೇ ಕಾರಣಕ್ಕೂ ಬಾಡಿಗೆ ಮಾಡುವಂತಿಲ್ಲ ಎಂಬುದನ್ನು ಆಟೋ ಚಾಲಕರು ಗಮನದಲ್ಲಿಡಬೇಕಾಗಿದೆ.
©2021 Tulunada Surya | Developed by CuriousLabs