ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಭೇಟಿ ಹಿನ್ನೆಲೆಯಲ್ಲಿ ಸೆ.2ರಂದು ಸಂಚಾರ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.
ಮಂಗಳೂರು ವಿಮಾನ ನಿಲ್ದಾಣದಿಂದ ಕಂಜಾರು – ಮರವೂರು – ಮರಕಡ – ಕಾವೂರು – ಬೊಂದೇಲ್ – ಪದವಿನಂಗಡಿ – ಯೆಯ್ಯಾಡಿ – ರಾಷ್ಟ್ರೀಯ ಹೆದ್ದಾರಿ 66 ರ ಕೆ.ಪಿ.ಟಿ. ಜಂಕ್ಷನ್‌ನಿಂದ – ಕೊಟ್ಟಾರ ಚೌಕಿ ಕೂಳೂರು – ಎನ್‌ಎಂಪಿಎವರೆಗೆ ಹಾದು ಹೋಗುವ ರಸ್ತೆಗಳ ಎರಡೂ ಬದಿಗಳಲ್ಲಿ ಎಲ್ಲಿ ರೀತಿಯ ವಾಹನಗಳ ನಿಲುಗಡೆಯನ್ನು ಬೆಳಿಗ್ಗೆ 6ರಿಂದ ಸಂಜೆ 6ರ ತನಕ ನಿಷೇಧಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಬಂಗ್ರಕೂಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನದ ಮತ್ತು ಸುತ್ತಲಿನ 500 ಮೀಟರ್ ವ್ಯಾಪ್ತಿಯ ರಸ್ತೆಗಳಲ್ಲಿ ಬೆಳಿಗ್ಗೆ 6ರಿಂದ ಸಂಜೆ 5ರ ತನಕ ಎಲ್ಲ ತರಹದ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಬಂಗ್ರ ಕೂಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನದ ಸಾರ್ವಜನಿಕ ಸಮಾವೇಶಕ್ಕೆ ಬರುವ ಅತಿ ಗಣ್ಯ ವ್ಯಕ್ತಿಗಳು, ಗಣ್ಯ ವ್ಯಕ್ತಿಗಳು, ಫಲಾನುಭವಿಗಳು ಮತ್ತು ಸಾರ್ವಜನಿಕರು ಉಪಯೋಗಿಸುವ ವಾಹನಗಳನ್ನು ನಿಗದಿತ ಪಾರ್ಕಿಂಗ್ ಸ್ಥಳಗಳಿಗೆ ಸಂಚರಿಸಲು ಮತ್ತು ತುರ್ತು ಸೇವೆಯ ವಾಹನಗಳು ನಿಷೇಧಿತ ರಸ್ತೆಗಳಲ್ಲಿ ಸಂಚರಿಸಲು ಅನುಮತಿ ನೀಡಲಾಗಿದೆ. ಸೆ.2ರಂದು ಬೆಳಗ್ಗೆ 10ರಿಂದ ಪ್ರಧಾನಿ ಮಂಗಳೂರು ವಿಮಾನ ನಿಲ್ದಾಣದಿಂದ ನಿರ್ಗಮಿಸುವವರೆಗೆ ನಂತೂರು, ಬಿಕರ್ನಕಟ್ಟೆ- ಕೈಕಂಬ, ಮಂಗಳ ಜ್ಯೋತಿ, ವಾಮಂಜೂರು, ಪೊರ್ಕೊಡಿ, ಮುಲ್ಕಿ, ಹಳೆಯಂಗಡಿ, ಜೋಕಟ್ಟೆ ಕ್ರಾಸ್, ಲೇಡಿಹಿಲ್ ಹೀಗೆ 9 ಜಂಕ್ಷನ್‌ಗಳಲ್ಲಿ ಸಂಚಾರ ಬದಲಾವಣೆ ಮಾಡಿ ಪರ್ಯಾಯ ರಸ್ತೆಗಳನ್ನು ಸೂಚಿಸಲಾಗಿದೆ.
