ಮಂಗಳೂರು: ಖಗ್ರಾಸ ಚಂದ್ರಗ್ರಹಣ ಇಂದು ನಡೆಯುವ ಹಿನ್ನೆಲೆಯಲ್ಲಿ ದ.ಕದ ಪ್ರಮುಖ ದೇವಳಗಳಲ್ಲಿ ಪೂಜಾ ಸಮಯಗಳಲ್ಲಿ ಬದಲಾವಣೆ ಮಾಡಲಾಗಿದೆ.
ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ: ಉಷಃಕಾಲ ಪೂಜೆ ನಡೆದು ಬೆಳಿಗ್ಗೆ 9.30ಕ್ಕೆ ಮಧ್ಯಾಹ್ನ ಪೂಜೆ ನಡೆಯಲಿದೆ. ಅನ್ನಪ್ರಸಾದ ವ್ಯವಸ್ಥೆಯಿದ್ದು 11.30ರವರೆಗೆ ಫಲಾಹಾರವಿದೆ. ಗ್ರಹಣ ಆರಂಭದಿಂದ ಮುಗಿಯುವವರೆಗೆ ಯಾವುದೇ ಸೇವೆ, ತೀರ್ಥಪ್ರಸಾದವಿಲ್ಲ. ಗ್ರಹಣ ಆರಂಭದಿಂದ ಅಂತ್ಯದವರೆಗೆ ದೇವರಿಗೆ ಅಭಿಷೇಕ ನಡೆಯಲಿದೆ. ಗ್ರಹಣ ಮಧ್ಯಕಾಲದಲ್ಲಿ ವಿಶೇಷ ಗ್ರಹಣ ಪೂಜೆ ನಡೆಯಲಿದ್ದು ಬಳಿಕ ತೀರ್ಥಪ್ರಸಾದ ವಿತರಣೆಯಾಗಲಿದೆ. ಗ್ರಹಣದ ಬಳಿಕ ಶುದ್ಧಿ ಆಗಿ ಬಳಿಕ ತೀರ್ಥಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 8.0ರ ಬಳಿಕ ಅನ್ನಪ್ರಸಾದ ವಿತರಣೆ ನಡೆಯಲಿದೆ. ಇನ್ನು ಮಂಗಳಾದೇವಿ ದೇವಸ್ಥಾನದಲ್ಲಿ ಉಷಃ ಕಾಲ ಪೂಜೆ, ಬೆಳಗ್ಗಿನ ಪೂಜೆ ಎಂದಿನಂತೆ ನಡೆಯಲಿದೆ. ಬೆಳಿಗ್ಗೆ 11.30ಕ್ಕೆ ಮಹಾ ಪೂಜೆ ನಡೆದು ದೇವಳ ಬಾಗಿಲು ಹಾಕುವುದು. ಗ್ರಹಣ ಆರಂಭದ ಹೊತ್ತು ದೇವಸ್ಥಾನ ಬಾಗಿಲು ತೆಗೆದು ಗ್ರಹಣ ಆರಂಭವಾಗುವವರೆಗೆ ಅಭಿಷೇಕ ಆರಂಭವಾಗಲಿದೆ. ಗ್ರಹಣ ಮೋಕ್ಷ ಬಳಿಕ ಪೂಜೆ, ರಾತ್ರಿ 8.30ಕ್ಕೆ ಮಹಾಪೂಜೆ ನಡೆಯಲಿದೆ. ಮರೋಳಿ ಶ್ರೀ ಸೂರ್ಯನಾರಾಯಣ ದೇವಾಲಯ: ಇಲ್ಲಿ ಬೆಳಗಿನ ಉಷಃ ಪೂಜೆ 4ಗಂಟೆಗೆ ನಡೆದು ಲಕ್ಷ ಅರ್ಕ ಪುಷ್ಪಾರ್ಚನೆ ನಡೆಯಲಿದೆ. ಬೆಳಿಗ್ಗೆ 9ಕ್ಕೆ ಮಹಾಪೂಜೆಯಾಗಿ ನಡೆಬಾಗಿಲು ಮುಚ್ಚಲಾಗುವುದು. ಗ್ರಹಣ ಮೋಕ್ಷ ನಂತರ ರಾತ್ರಿ 7ಗಂಟೆಗೆ ನಡೆಬಾಗಿಲು ತೆರೆದು ಪುಣ್ಯಾಹ ಅಭಿಷೇಕ, ಪ್ರಾಯಶ್ಚಿತ್ತ ಕಲಶಾಭಿಷೇಕ ಜರುಗಿ ದೀಪೋತ್ಸವದ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿದೆ. ನ.9ರಂದು ಬೆಳಿಗ್ಗೆ 9ಗಂಟೆಗೆ ಗ್ರಹಣ ಶಾಂತಿ ಹೋಮ ಜರುಗಲಿದೆ. ಹಳೇಕೋಟೆ ಶ್ರೀಮಾರಿಯಮ್ಮ ದೇವಸ್ಥಾನ: ಭಕ್ತರ ಗ್ರಹಣದ ದೋಷದ ಪರಿಹಾರಕ್ಕಾಗಿ ತಂಡೂಲಾ ಹಾಗೂ ದೀಪದ ಎಣ್ಣೆ ಸೇವೆ ರಾತ್ರಿ 7ಗಂಟೆಯ ನಂತರ ವಿಶೇಷ ಸೇವೆ ಜರುಗಲಿದೆ. ಗ್ರಹಣದ ಪ್ರಯುಕ್ತ ಅನ್ನಸಂತರ್ಪಣೆ ಸೇವೆ ಜರುಗುವುದಿಲ್ಲ. ಮಧ್ಯಾಹ್ನ ಮಹಾಪೂಜೆ ನಂತರ ದೇವಳ ಬಂದ್ ಮಾಡಿ ರಾತ್ರಿ 7ಕ್ಕೆ ಬಾಗಿಲು ತೆರೆಯಲಾಗುತ್ತದೆ ಎಂದು ದೇವಸ್ಥಾನ ಪ್ರಕಟಣೆ ತಿಳಿಸಿದೆ.
