ಉಳ್ಳಾಲ: ಕೇರಳದಿಂದ ಅಕ್ರಮವಾಗಿ ಟಾಟಾ ಏಸ್ ವಾಹನದಲ್ಲಿ ಜಾನುವಾರುಗಳನ್ನ ಉಸಿರುಗಟ್ಟಿಸಿ ಸಾಗಿಸುತ್ತಿದ್ದ ವೇಳೆ ರಸ್ತೆ ಏರಲಾರದೆ ವಾಹನ ನಿಂತಿದ್ದು ಬಜರಂಗದಳದ ಕಾರ್ಯಕರ್ತರು ಜಾನುವಾರುಗಳನ್ನ ರಕ್ಷಿಸಿದ ಘಟನೆ ನಿನ್ನೆ ರಾತ್ರಿ ಕುತ್ತಾರು ಸಮೀಪದ ಭಂಡಾರ ಬೈಲು ಎಂಬಲ್ಲಿ ನಡೆದಿದೆ. ಕೇರಳ ನೋಂದಣಿಯ ಏಸ್ ವಾಹನವು ಮುಡಿಪು, ಕೊಣಾಜೆ, ಮದಕ ಮಾರ್ಗವಾಗಿ 5 ಜಾನುವಾರುಗಳನ್ನ ಅಕ್ರಮವಾಗಿ ತುಂಬಿಸಿ ಸಾಗುತ್ತಿದ್ದ ವೇಳೆ ಭಂಡಾರ ಬೈಲು ರಸ್ತೆಯ ಕಡಿದಾದ ಏರನ್ನ ಏರಲಾರದೆ ನಿಂತು ಬಿಟ್ಟಿತ್ತು. ಈ ವೇಳೆ ಸ್ಥಳದಲ್ಲಿದ್ದ ಬಜರಂಗದಳದ ಕಾರ್ಯಕರ್ತರು ವಾಹನವನ್ನ ತಳ್ಳಿ ಚಾಲಕನಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ವಾಹನದ ಹಿಂದುಗಡೆ ಮೀನಿನ ಪ್ಲಾಸ್ಟಿಕ್ ಟ್ರೇಗಳನ್ನ ರಾಸಿ ಹಾಕಲಾಗಿದ್ದು ಅದರೊಳಗಡೆ ಸದ್ದು ಕೇಳಿಸಿದಾಗ ಒಳಗಡೆ 5 ಜಾನುವಾರುಗಳನ್ನ ಉಸಿರುಗಟ್ಟಿಸಿ ಕಟ್ಟಿ ಹಾಕಿದ್ದನ್ನ ಹುಡುಗರು ಕಂಡಿದ್ದಾರೆ. ತಕ್ಷಣ ವಾಹನದಲ್ಲಿದ್ದ ಚಾಲಕ ಸೇರಿ ಇಬ್ಬರು ಪರಾರಿಯಾಗಿದ್ದು, ಎಸ್ಕಾರ್ಟ್ ನೀಡುತ್ತಿದ್ದ ಇಬ್ಬರು ಬೈಕ್ ಅನ್ನ ಬಿಟ್ಟು ಓಡಿದ್ದಾರೆ. ವಾಹನದಲ್ಲಿದ್ದ ಒಂದು ಕರು ದಿಕ್ಕಾ ಪಾಲಾಗಿ ತಪ್ಪಿಸಿಕೊಂಡಿದ್ದು, ಮತ್ತೊಂದು ಕರು, ಎರಡು ಹೋರಿ, ಒಂದು ಹಸುವನ್ನ ಬಜರಂಗದಳ ಕಾರ್ಯಕರ್ತರು ರಕ್ಷಿಸಿ ಉಳ್ಳಾಲ ಠಾಣೆಗೆ ಒಪ್ಪಿಸಿದ್ದಾರೆ.
©2021 Tulunada Surya | Developed by CuriousLabs