ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರು ಮೂಲದ ದಂಪತಿ ತಮ್ಮ ಮೂರೂವರೆ ವರ್ಷದ ಮಗಳನ್ನು ಯಾವುದೇ ಧಾರ್ಮಿಕ ಸಂಬಂಧವಿಲ್ಲದ ಹಾಗೂ ಜಾತಿ ರಹಿತ ಎಂದು ಗುರುತಿಸುವ ನಿರ್ಧಾರ ಮಾಡಿದ್ದಾರೆ.
ಕೊಯಮತ್ತೂರಿನಲ್ಲಿ ಸಣ್ಣ ಡಿಸೈನಿಂಗ್ ಸಂಸ್ಥೆ ನಡೆಸುವ ನರೇಶ್ ಕಾರ್ತಿಕ್, ತಮ್ಮ ಮಗಳನ್ನು ಶಾಲೆಗೆ ಸೇರಿಸಲು ಅರ್ಜಿ ಭರ್ತಿ ಮಾಡುವಾಗ ಜಾತಿ ಮತ್ತು ಧರ್ಮದ ಕಾಲಂ ಅನ್ನು ಖಾಲಿ ಬಿಡುತ್ತಿದ್ದರು. ಇದೇ ಕಾರಣಕ್ಕೆ ಎಲ್ಲ ಶಾಲೆಗಳಲ್ಲಿ ಅವರ ಅರ್ಜಿಯನ್ನು ಕಾಯ್ದಿರಿಸುತ್ತಿದ್ದರು. ಇದರಿಂದ ಒಂದು ನಿರ್ಧಾರಕ್ಕೆ ಬಂದ ಕಾರ್ತಿಕ್, ಉತ್ತರ ಕೊಯಮತ್ತೂರಿನ ತಾಲೂಕು ಕಚೇರಿಯಿಂದ ಧರ್ಮ ಮತ್ತು ಜಾತಿ ರಹಿತ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾರೆ. ಮಗು ಜಿ.ಎನ್. ವಿಲ್ಮ ಯಾವುದೇ ಧರ್ಮ ಮತ್ತು ಜಾತಿಗೆ ಸೇರಿದವಳಲ್ಲ ಎಂದು ಪ್ರಮಾಣ ಪತ್ರದಲ್ಲಿ ಉಲ್ಲೇಖವಾಗಿದೆ.
1973 ಮತ್ತು 2000 ಇಸವಿಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಶಾಲಾ ಅರ್ಜಿಯಲ್ಲಿ ಜಾತಿ ಮತ್ತು ಧರ್ಮದ ಕಾಲಂಗಳನ್ನು ಖಾಲಿ ಬಿಡಲು ಅನುವು ಮಾಡಿಕೊಡಲಾಗಿದೆ. ಆದರೆ, ಶಾಲೆಯ ಅಧಿಕಾರಿಗಳಿಗೆ ಈ ಬಗ್ಗೆ ಯಾವುದೇ ಜ್ಞಾನವಿಲ್ಲ ಎಂದು ಕಾರ್ತಿಕ್ ಕಿಡಿಕಾರಿದ್ದಾರೆ. ನಾನು ಶಾಲಾ ಆಡಳಿತ ಮಂಡಳಿಗೆ ಸರ್ಕಾರದ ಆದೇಶ ಪ್ರತಿಯ ನಕಲುಗಳನ್ನು ತೋರಿಸಿದಾಗ ಅಧಿಕಾರಿಗಳು ಗೊಂದಲಕ್ಕೆ ಒಳಗಾದರು. ವಿವಿಧ ಸಮುದಾಯಗಳಿಂದ ಶಾಲಾ ದಾಖಲಾತಿಗಳು ಮತ್ತು ಶಾಲೆ ಬಿಟ್ಟವರ ಅಂಕಿ-ಅಂಶಗಳಿಗಾಗಿ ಸರ್ಕಾರಕ್ಕೆ ವಿವರಗಳನ್ನು ಒದಗಿಸಬೇಕಾಗಿರುವುದರಿಂದ ಕಾಲಂ ಭರ್ತಿ ಮಾಡಲೇಬೇಕು ಎಂದು ಒತ್ತಾಯಿಸಿದರು.
ನನ್ನನ್ನು ಅಂಕಿ-ಅಂಶಗಳಿಂದ ಹೊರಗಿಡಲು ಅಥವಾ ನಮ್ಮಂತಹ ಜನರಿಗೆ ಪ್ರತ್ಯೇಕ ವರ್ಗವನ್ನು ರಚಿಸಲು ಕೇಳಿದಾಗ, ನಿರಾಕರಿಸಿದರು. ಇದೇ ಕಾರಣದಿಂದ ನನ್ನ ಮಗುವಿಗೆ ಜಾತಿ ಮತ್ತು ಧರ್ಮ ರಹಿತ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದೇನೆಂದು ಕಾರ್ತಿಕ್ ಹೇಳಿದರು. ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸುವ ಮೊದಲು ಕಾರ್ತಿಕ್, ಕುತೂಹಲದಿಂದ ತನ್ನ ಮಗಳ ಪ್ರವೇಶಕ್ಕಾಗಿ ಇಪ್ಪತ್ತೆರಡು ಖಾಸಗಿ ಶಾಲೆಗಳಿಗೆ ಅರ್ಜಿ ಸಲ್ಲಿಸಿದ್ದರು. ಪ್ರತಿಯೊಂದು ಶಾಲೆ ಕೂಡ ಜಾತಿ ಮತ್ತು ಧರ್ಮದ ಕಾಲಂಗಳು ಖಾಲಿ ಇವೆ ಎಂದು ಉಲ್ಲೇಖಿಸಿ ಅರ್ಜಿಯನ್ನು ಕಾಯ್ದಿರಿಸಿದ್ದರು.
ನನ್ನ ಮಗಳನ್ನು ಎಲ್ಲಿಗೆ ಸೇರಿಸಬೇಕೆಂದು ನಾನು ಮೊದಲೇ ನಿರ್ಧರಿಸಿದ್ದೆ, ಆದರೆ ಅರ್ಜಿಗಳಲ್ಲಿ ಜಾತಿ-ಧರ್ಮ ಕಾಲಂಗಳನ್ನು ಖಾಲಿ ಬಿಟ್ಟರೆ ಏನಾಗುತ್ತದೆ ಎಂದು ನೋಡಲು ಹೀಗೆ ಮಾಡಿದೆ. ಆದರೆ, ಸರ್ಕಾರದ ಆದೇಶ ಇರುವುದು ಯಾರಿಗೂ ತಿಳಿದಿಲ್ಲ. ಒಬ್ಬರ ಜಾತಿ ಅಥವಾ ಧರ್ಮವನ್ನು ಘೋಷಿಸದಿರಲು ಆಯ್ಕೆ ಮಾಡುವ ನಿಬಂಧನೆ ಇರುವುದರ ಬಗ್ಗೆ ಶಾಲೆಗಳಿಗೆ ತಿಳಿದಿಲ್ಲದಿರುವುದು ದುರದೃಷ್ಟಕರ ಸಂಗತಿ ಎಂದು ಕಾರ್ತಿಕ್ ಹೇಳಿದರು.
ಇದು ಶಾಲೆಯ ಅಧಿಕಾರಿಗಳ ತಪ್ಪಲ್ಲ. ನಮ್ಮ ಶಿಕ್ಷಣ ವ್ಯವಸ್ಥೆಯಿಂದಾಗಿ ಇಂತಹ ನಿಬಂಧನೆಗಳ ಅಸ್ತಿತ್ವವು ಜನರಿಗೆ ತಿಳಿದಿಲ್ಲ. ಆದರೆ, ಇದು ಒಂದು ಶಿಕ್ಷಣ ಕೂಡ ಹೌದು. ಎಲ್ಲರಿಗು ಇದು ತಿಳಿದಿರಬೇಕೆಂದು ಕಾರ್ತಿಕ್ ಹೇಳಿದರು. ಅಲ್ಲದೆ, ನಾನು ಯಾವುದೇ ಧರ್ಮವನ್ನು ನಂಬುವುದಿಲ್ಲ. ನಾನು ಎಲ್ಲ ಧರ್ಮಗಳ ಪವಿತ್ರ ಪುಸ್ತಕಗಳನ್ನು ಓದುತ್ತೇನೆ. ಜಾತಿ ಎನ್ನುವುದು ಧರ್ಮದ ಉತ್ಪನ್ನವಾಗಿದೆ ಎಂದಿದ್ದಾರೆ.

